ಇತರೆ

ಧ್ವನಿವರ್ಧಕ ಶಬ್ಧ ಕಡಿಮೆ ಮಾಡಿ, ಓದಲು ತೊಂದರೆ ಆಗುತ್ತೆ ಎಂದು  ಹಿರಿಯ ಸಾಹಿತಿ ರಾಮಯ್ಯ ಕೇಳಿದ್ದಕ್ಕೆ ಹಲ್ಲೆ 

Views: 146

ದೇವಸ್ಥಾನದಲ್ಲಿ ಹಾಕಿದ್ದ ಧ್ವನಿವರ್ಧಕ ಶಬ್ಧ ಕಡಿಮೆ ಮಾಡುವಂತೆ ಕೇಳಿದ್ದಕ್ಕೆ ಹಿರಿಯ ಸಾಹಿತಿ, ದಲಿತ ಚಳವಳಿ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಪುತ್ರನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ.

ಕೋಲಾರದ ಪಾಪರಾಜನಹಳ್ಳಿಯಲ್ಲಿ ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ರಾಮಯ್ಯ ಅವರ ಮೇಲೆ ಹಲ್ಲೆ ನಡೆದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ. ನಾರಾಯಣಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಪಾಪರಾಜನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ, ಬೈರಪ್ಪ, ತೇರಹಳ್ಳಿಯ ಮುನಿಯಪ್ಪ ಮುಂತಾದವರು ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಜಿಲ್ಲೆಯ ಪ್ರಮುಖ ದಲಿತ ಮುಖಂಡರು ಮತ್ತು ಹೋರಾಟಗಾರರು ರಾಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ, ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ ನಡೆದಿದೆ. ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಧ್ವನಿವರ್ಧಕ ಶಬ್ಧ ಹೆಚ್ಚು ಮಾಡುತ್ತಿದ್ದರು ಎನ್ನಲಾಗಿದ್ದು, ಇಂದು ಬೆಳಿಗ್ಗೆ ದೇವಸ್ಥಾನದ ಬಳಿಗೆ ತೆರಳಿದ್ದ ರಾಮಯ್ಯನವರು, “ಧ್ವನಿವರ್ಧಕ ಶಬ್ಧ ಕಡಿಮೆ ಮಾಡಿ, ಓದಲು ತೊಂದರೆ ಆಗುತ್ತೆ” ಎಂದು ಕೇಳಿಕೊಂಡಿದ್ದಾರೆ. ರಾಮಯ್ಯ ‘ಬುಡ್ಡಿ ದೀಪ’ದಲ್ಲಿ ಇರಬಾರದು ಎಂದು ಗಲಾಟೆ ಮಾಡಿದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು, ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ರಾಮಯ್ಯ ಹಾಗೂ ಮಗ ಮೇಘಾವರ್ಷ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಲಾಗಿದ್ದು, ಕಣ್ಣಿನ ಪರೀಕ್ಷೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆ ಮಾಡಿದ ಮಂಜುನಾಥ್ ಮತ್ತು ಇತರರನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

 

Related Articles

Back to top button
error: Content is protected !!