ಅತಿಥಿ ಉಪನ್ಯಾಸಕರ ಮುಷ್ಕರ ತಿಂಗಳ ನಂತರ ಎಚ್ಚೆತ್ತ ಸರ್ಕಾರ, ವೇತನ ರೂ.5 ಸಾವಿರ ಹೆಚ್ಚಳ

Views: 27
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವೇತನ ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಶುಕ್ರವಾರ ವಿಕಾಸ ಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಸಚಿವರು, “ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ರೂ.ಹೆಚ್ಚಳ ಮಾಡಲಾಗುತ್ತದೆ” ಎಂದರು.
“ಅತಿಥಿ ಉಪನ್ಯಾಸಕರ ಜೊತೆ ನಡೆಸಿದ ಸಭೆಯಲ್ಲಿ ಹಲವು ಬೇಡಿಕೆಗಳನ್ನು ಇಟ್ಟರು. ತಿಂಗಳಿಗೆ ಒಂದು ವೇತನ ಸಹಿತ ರಜೆ ನೀಡಲಾಗುತ್ತದೆ. ಅವರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ಸಚಿವರು ಹೇಳಿದರು.
* ನಾವು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದ್ದೇವೆ. ಸೇವೆ ಖಾಯಂಗೊಳಿಸುವುದು ಅವರ ಬೇಡಿಕೆಯಾಗಿದೆ. ಅವರ ವರ್ಕ್ ಲೋಡ್ ಬಗ್ಗೆಯೂ ಮಾತುಕತೆಯನ್ನು ನಡೆಸಲಾಗಿದೆ.
* ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುತ್ತೇವೆ. ಹೊಸ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ನೀಡಲು ನಿರ್ಧರಿಸಲಾಗಿದೆ.
* ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ರೂ. ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಮುಷ್ಕರವನ್ನು ಅತಿಥಿ ಉಪನ್ಯಾಸಕರು ವಾಪಸ್ ಪಡೆಯಬೇಕು ಎಂದು ಮನವಿ ಮಾಡುತ್ತೇನೆ.
ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 23ರಿಂದ ತರಗತಿಗಳನ್ನು ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದಾಗಿ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು.
ಮುಷ್ಕರ ಆರಂಭಗೊಂಡು ತಿಂಗಳುಗಳು ಕಳೆದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹೆಚ್ಚಿದ್ದು, ಪ್ರತಿಭಟನೆಯ ಕಾರಣ ತರಗತಿಗಳು ನಡೆಯುತ್ತಿರಲಿಲ್ಲ.






