ರಾಜಕೀಯ

ವಿಧಾನಸಭೆಗೆ ಆರ್.ಅಶೋಕ್, ಪರಿಷತ್ತಿಗೆ ಕೋಟ? ಕೊನೆ ಕ್ಷಣದಲ್ಲಿ ಹೊಸಬರಿಗೆ ಅವಕಾಶ ಸಾಧ್ಯತೆ!

Views: 88

ವಿರೋಧಪಕ್ಷದ ನಾಯಕ ಸ್ಥಾನದ ಆಯ್ಕೆ ಶುಕ್ರವಾರ ನಡೆಯಲಿದ್ದು, ಶಾಸಕರಾದ ವಿ.ಸುನಿಲ್‌ಕುಮಾರ್, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರ್‌.ಅಶೋಕ ಅವರ ಹೆಸರು ಮುನ್ನೆಲೆಗೆ ಬಂದಿದೆ.

ಸಂಜೆ 6 ಕ್ಕೆ ಐಟಿಸಿ ಗಾರ್ಡೇನಿಯಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಗಾಗಿ ಕೇಂದ್ರದಿಂದ ಇಬ್ಬರು ವೀಕ್ಷಕರು ಬರಲಿದ್ದು, ಯಾರೆಲ್ಲ ಬರುತ್ತಾರೆ ಮತ್ತು ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಸ್ಪಷ್ಟತೆ ಸಿಕ್ಕಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪಕ್ಷದ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ವಿರೋಧಪಕ್ಷದ ನಾಯಕ ಸ್ಥಾನವನ್ನು ಹಿಂದುಳಿದ ಸಮುದಾಯಕ್ಕೆ ನೀಡುವುದಾದರೆ ಸುನಿಲ್‌ಕುಮಾರ್ ಅವರಿಗೂ, ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವುದಾದರೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಹೊಣೆಗಾರಿಕೆ ನೀಡಬಹುದು. ಅಶೋಕ ಅವರು ಹಿರಿತನದ ಆಧಾರದಲ್ಲಿ ವಿರೋಧಪಕ್ಷದ ನಾಯಕನಾಗಬೇಕು ಎಂಬ ಉತ್ಸಾಹದಲ್ಲಿದ್ದಾರೆ. ಆದರೆ, ಇವರಿಗೆ ಎದುರಾಳಿ ನಾಯಕರನ್ನು ಮಾತಿನಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ಅಂತಿಮ ಕ್ಷಣದಲ್ಲಿ ಹಿರಿತನದ ಆಧಾರದಲ್ಲಿ ಅಶೋಕ ಅವರಿಗೆ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ವಿಜಯೇಂದ್ರ ಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಗತ್ಯವನ್ನು ವರಿಷ್ಠರು ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಜೊತೆ ಉತ್ತಮ ಬಾಂಧವ್ಯ ಹೊಂದಿದವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ಸಿಗುವುದು ನಿರೀಕ್ಷಿತ. ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕನ ಹುದ್ದೆಗೆ ಈಗಾಗಲೇ ಹಲವು ಹೆಸರು ಕೇಳಿ ಬರುತ್ತಿದ್ದು ಎರಡು ಹೆಸರುಗಳು ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ. ಕೊನೆ ಕ್ಷಣದಲ್ಲಿ ಬದಲಾವಣೆಯಾಗಬಹುದು ಆದರೆ ಅಂತಹ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.

ವಿಧಾನಸಭೆಯ ಪ್ರತಿಪಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್ ಅಶೋಕ್ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಹೆಸರು ಮುಂಚೂಣಿಯಲ್ಲಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಕಾರ್ಕಳದ ಸುನಿಲ್ ಕುಮಾರ್ ಹೆಸರು ಕೇಳಿ ಬಂದಿದೆ. ಆದರೆ, ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಅಶೋಕ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ಅಶ್ವಥ್ ನಾರಾಯಣ್, ಸುನಿಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದ್ದರೆ ಗಾಡ್ ಫಾದರ್ ಕೊರತೆ ಕಾಣಬಹುದು.

ಮೇಲ್ಮನೆಗೆ ಕೋಟ ಶ್ರೀನಿವಾಸ್ ಪೂಜಾರಿ, ಛಲವಾದಿ ನಾರಾಯಣಸ್ವಾಮಿ ಮಧ್ಯೆಪೈಪೋಟಿ

ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ ಆಯ್ಕೆಯು ನಡೆಯಲಿದ್ದು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮದ್ಯೆ ಪ್ರಬಲ ಪೈಪೋಟಿ ಇದೆ. ಹಿಂದುಳಿದ ವರ್ಗಕ್ಕೆ ಸೇರಿದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಈ ಹಿಂದೆ ಸಚಿವರಾಗಿ, ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವಿದೆ. ಜೊತೆಗೆ ಯಡಿಯೂರಪ್ಪ ಅವರ ಜೊತೆ ಬಾಂಧವ್ಯವು ಇದೆ ಹಾಗೆಯೇ ಛಲವಾದಿ ಕೂಡ ಯಡಿಯೂರಪ್ಪ ಗೆ ಆಪ್ತರೇ.

ಛಲವಾದಿ ನಾರಾಯಣಸ್ವಾಮಿಯವರಿಗೆ ಅವಕಾಶ ನೀಡಿದರೆ ದಲಿತ ಸಮುದಾಯವನ್ನು ಸೆಳೆಯಬಹುದು. ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಕೈಬಿಟ್ಟರೆ ಹಿಂದುಳಿದ ವರ್ಗದವರು ಮುನಿಸಿಕೊಳ್ಳಬಹುದು ಎಂಬ ಆತಂಕ ಇದೆ.

ಲಿಂಗಾಯಿತ ಸಮುದಾಯಕ್ಕೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಧಾನಸಭೆಗೆ ವಿಪಕ್ಷ ನಾಯಕನ ಸ್ಥಾನಕ್ಕೆ ಒಕ್ಕಲಿಗ ಅಥವಾ ಹಿಂದುಳಿದ ವರ್ಗಕ್ಕೆ ಮಣೆ ಹಾಕಬಹುದು ಎಂಬ ಲೆಕ್ಕಾಚಾರಗಳಿವೆ. ಇದರ ಆಧಾರದ ಮೇಲೆ ವಿಧಾನ ಪರಿಷತ್ ವಿಪಕ್ಷ ನಾಯಕನ ಆಯ್ಕೆಯಲ್ಲಿಯೂ ವ್ಯತ್ಯಾಸವಾಗಬಹುದು.

 

 

 

Related Articles

Back to top button
error: Content is protected !!