8 ಬಾರಿ ಆಕ್ರಮ ಮತದಾನ: ಬಿಜೆಪಿ ಕಾರ್ಯಕರ್ತನ ಪುತ್ರ ಅರೆಸ್ಟ್

Views: 86
ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಹದಿಹರೆಯದ ಪುತ್ರನೋರ್ವ 8 ಬಾರಿ ಬಿಜೆಪಿಗೆ ಮತ ಹಾಕಿದ್ದು, ಆತನನ್ನು ವಿಡಿಯೋ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಖಿರಿಯಾ ಪಮರನ್ ಗ್ರಾಮದ ಅನಿಲ್ ಸಿಂಗ್ ಎಂಬವರ ಪುತ್ರ ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಬಂಧನದ ಕುರಿತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಮಾಹಿತಿ ನೀಡಿದ್ದಾರೆ. ಆರೋಪಿ ಯುವಕನ ತಂದೆ ಅನಿಲ್ ಸಿಂಗ್ ಖಿರಿ ಪಮರನ್ ಗ್ರಾಮ ಪ್ರಧಾನರಾಗಿದ್ದು ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದಾನೆ.
ವಿಡಿಯೋ ಆಧಾರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಇತರ ಅಪರಾಧದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಡಿಯೋದಲ್ಲಿ ಹದಿಹರೆಯದ ಯುವಕನೋರ್ವ ಬಿಜೆಪಿಗೆ ಎಂಟು ಬಾರಿ ಮತ ಹಾಕುವುದು ಸೆರೆಯಾಗಿತ್ತು.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪಿ ತ್ರಿಪಾಠಿ ನೀಡಿದ ದೂರಿನ ಆಧಾರದ ಮೇಲೆ ಹದಿಹರೆಯದ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ವೀಡಿಯೊದಲ್ಲಿ ಕಂಡುಬರುವ ಅಪ್ರಾಪ್ತ ವಯಸ್ಕನಂತೆ ಕಾಣುವ ವ್ಯಕ್ತಿಯನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನಯಾ ಗಾಂವ್ ಎಸ್‌ಎಚ್‌ಒ ರಿತೇಶ್ ಠಾಕೂರ್ ಈ ಮೊದಲು ಹೇಳಿದ್ದರು.
ಫರೂಕಾಬಾದ್ ಕ್ಷೇತ್ರದಿದ ಬಿಜೆಪಿಯಿಂದ ಮುಕೇಶ್ ರಾಜಪುತ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆದಿತ್ತು. ಘಟನೆ ಬಯಲಾಗುತ್ತಿದ್ದಂತೆ ಈ ನಿರ್ದಿಷ್ಟ ಮತಗಟ್ಟೆಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸಲು ಹಾಗೂ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಮತಗಟ್ಟೆಯಲ್ಲಿ ಮರುಮತದಾನಕ್ಕೂ ಶಿಫಾರಸು ಮಾಡಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.






