5,8,9 ತರಗತಿಯ “ಅವೈಜ್ಞಾನಿಕ ಮೌಲ್ಯಮಾಪನ ನೀತಿ”,ಪರೀಕ್ಷಾ ಮಂಡಳಿಯ ವಿರುದ್ಧ ಶಿಕ್ಷಕರ ತೀವ್ರ ಅಸಮಾಧಾನ

Views: 67
ಬೆಂಗಳೂರು ರಾಜ್ಯ ಪಠ್ಯಕ್ರಮ ಶಾಲೆಗಳ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನವನ್ನು ಕೇವಲ 4 ದಿನಗಳಲ್ಲಿ ಮುಗಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಸೂಚನೆ ನೀಡಿರುವುದಕ್ಕೆ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇವಲ 4 ದಿನಗಳಲ್ಲಿ 28.14 ಲಕ್ಷ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ಮುಗಿಸಲು ಸಾಧ್ಯವೇ? ಈ ರೀತಿ ಅವೈಜ್ಞಾನಿಕವಾಗಿ ಮೌಲ್ಯಮಾಪನ ನಿಯಮಗಳನ್ನು ಜಾರಿಗೊಳಿಸಿದರೆ, ಅನುಷ್ಠಾನ ಮಾಡುವುದು ಹೇಗೆ?, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ, ಮತ್ತೊಂದೆಡೆ ಮೌಲ್ಯಾಂಕನ ಪರೀಕ್ಷಾ ಕಾರ್ಯ ಮುಗಿಸಿ 4 ದಿನಗಳಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವೇ ಎಂದು ಶಿಕ್ಷಕರು ಗರಂ ಆಗಿದ್ದಾರೆ.
5ನೇ ತರಗತಿಗೆ ಮಾ.26ರಂದು ಮೌಲ್ಯಾಂಕನ ಮುಗಿದಿದ್ದು, ಮೌಲ್ಯಮಾಪಕರು ಪ್ರತಿ ದಿನ 80 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನ ಮಾಡುವ ಮೂಲಕ ಮಾ.31ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಬೇಕು. 8 ಮತ್ತು 9ನೇ ತರಗತಿ ಮೌಲ್ಯಾಂಕನವು ಮಾ.28ರಂದು ಮುಗಿಯಲಿದೆ. 8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 60 ಉತ್ತರ ಪತ್ರಿಕೆಗಳನ್ನು ಹಾಗೂ 9ನೇ ತರಗತಿಯ 40 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕು. ಏ.2ರೊಳಗೆ ಮೌಲ್ಯಮಾಪನ ಪೂರ್ಣಗೊಳಿಸಬೇಕು. ಬಳಿಕ ಎಲ್ಲ ತರಗತಿಗಳ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಆಯಾ ಶಾಲೆಗಳಿಗೆ ಮರು ರವಾನೆ ಮಾಡಬೇಕು.
ವಿಷಯವಾರು ಕೀ ಉತ್ತರಗಳ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬ್ಲಾಕ್ ಹಂತದಲ್ಲಿ ಅಂತರ್ ಕ್ಲಸ್ಟರ್‌ವಾರು ಮೌಲ್ಯಮಾಪನ ಕಾರ್ಯವನ್ನು ಮಾಡಬೇಕು. ಶಾಲಾ ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿದ ಅಂಕವನ್ನು ಗ್ರೇಡ್‌ಗಳಾಗಿ ಪರಿವರ್ತಿಸಿ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ಸಮುದಾಯದತ್ತ ಶಾಲಾ ದಿನದಂದು ವಿದ್ಯಾರ್ಥಿಗಳಿಗೆ ಪಲಿತಾಂಶವನ್ನು ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮತ್ತು ಬಿಇಒಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 7ರಿಂದ 8 ಲಕ್ಷವಿರುವ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯವನ್ನು ಮಾಡಿ ಮುಗಿಸಲು ಕನಿಷ್ಠ 20 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಈಗ 28 ಲಕ್ಷ ಮಕ್ಕಳ ಮೌಲ್ಯಮಾಪನ ಕಾರ್ಯವನ್ನು 4 ದಿನಗಳಲ್ಲಿ ಮುಗಿಸಿ ಎಂದು ಸೂಚಿಸಿದೆ. ಈ ವಿಷಯದಲ್ಲಿ ಅಧಿಕಾರಿಗಳು ಯೋಚನೆಯೇ ಮಾಡದೆ ಆದೇಶ ಹೊರಡಿಸಿದ್ದಾರೆ ಎಂದು ಶಿಕ್ಷಕರು ಪರೀಕ್ಷಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.