ಶಿಕ್ಷಣ

5, 7, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ

Views: 7

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ.

5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಮೌಲ್ಯಮಾಪನ ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಈ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದು ಕರೆಯದೇ, ಮೌಲ್ಯಮಾಪನ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಎರಡು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ಇಲಾಖೆ ಯೋಜನೆ ರೂಪಿಸಲು ಮುಂದಾಗಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲು ಚರ್ಚೆ ಶುರುವಾಗಿದೆ.

ಈ ಹಿಂದೆ ಬೋರ್ಡ್ ಮಾದರಿಯ ವಾರ್ಷಿಕ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದ್ದಾಗ ಪೋಷಕರು, ಖಾಸಗಿ ಶಾಲೆಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಕೋರ್ಟ್ ಮೊರೆ ಕೂಡ ಹೋಗಲಾಗಿತ್ತು. ಆದರೆ ಈ ಬಾರಿ ಅದೇ ಪರೀಕ್ಷೆಯನ್ನು ಮೌಲ್ಯಮಾಪನ ಪರೀಕ್ಷೆ ಎಂಬ ಮಾದರಿಯಲ್ಲಿ ಫೇಲ್ ಮಾಡದೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕಾ ಸುಧಾರಣೆ ಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಆಲೋಚನೆಗೆ ಮುಂದಾಗಿದೆ.

ಮೌಲ್ಯಮಾಪನ ಪರೀಕ್ಷೆಯ ವಿಶೇಷತೆಗಳು ಏನು?

5, 7, 8 ಹಾಗೂ 9ನೇ ತರಗತಿಗಳಿಗೆ ಅನ್ವಯ

ಬೋರ್ಡ್ ಪರೀಕ್ಷೆ ಎಂದು ಕರೆಯುವ ಬದಲು ಮೌಲ್ಯಮಾಪನ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮೌಲ್ಯಮಾಪನ ಉದ್ದೇಶ

ಪರೀಕ್ಷಾ ಮಂಡಳಿಯಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುವುದು.

ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಮಾಡಿ, ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ರವಾನೆ ಮಾಡಲಾಗುವುದು.

ಮಕ್ಕಳ ಕಲಿಕಾ ಪ್ರಗತಿಗೆ ಅನುಕೂಲ ಜೊತೆಗೆ ಮಕ್ಕಳ ವಾರ್ಷಿಕ ಕಲಿಕಾ ಮಟ್ಟ ಪರಿಶೀಲನೆ

ಪರೀಕ್ಷಾ ಮಂಡಳಿಯೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಿ ಆಯಾ ಶಾಲೆಗಳಿಗೆ ಕಳುಹಿಸಲಿದೆ. ಬಳಿಕ ತಾಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ರಾಜ್ಯಾದ್ಯಂತ ಏಕರೂಪದ ಮೌಲ್ಯಮಾಪನ ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

Related Articles

Back to top button
error: Content is protected !!