3 ಕೋಟಿ ವಿಮೆಗಾಗಿ ತಂದೆಗೆ ಹಾವು ಕಚ್ಚಿಸಿ ಕೊಂದ ಪುತ್ರರು!
Views: 144
ಕನ್ನಡ ಕರಾವಳಿ ಸುದ್ದಿ: ತಂದೆ ಸತ್ತ ನಂತರ ಅವರ 3 ಕೋಟಿ ರೂ.ವಿಮೆ ಹಣವನ್ನು ಪಡೆಯಬಹುದು ಎಂಬ ದುರುದ್ದೇಶದಿಂದ ಸ್ವಂತ ಪುತ್ರರೇ ಅತ್ಯಂತ ವಿಷಪೂರಿತ ಕಟ್ಟುಹಾವನ್ನು ತಂದು, ತಂದೆಗೆ ಕಚ್ಚಿಸಿ ಕೊಂದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈ ಸಂಬಂಧ ಮೃತನ ಇಬ್ಬರು ಪುತ್ರರು ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಪೊಥತೂರ್ಪೆಟ್ಟೆ ಎಂಬಲ್ಲಿ ಸರ್ಕಾರಿ ಶಾಲೆಯ ಪ್ರಯೋಗಾಲಯದ ಸಹಾಯಕರಾಗಿದ್ದರು. ಇವರಿಗೆ ಇಬ್ಬರು ಪುತ್ರರು 3 ಕೋಟಿ ರೂ. ಜೀವವಿಮೆ ಮಾಡಿಸಿದ್ದರು. ಈ ನಡುವೆ, ಗಣೇಶನ್ ಕಳೆದ ಅಕ್ಟೋಬರ್‌ನಲ್ಲಿ ಹಾವು ಕಡಿತದಿಂದಾಗಿ ಮೃತಪಟ್ಟಿದ್ದರು.

ಬಳಿಕ ಪುತ್ರರು 3 ಕೋಟಿ ರೂ. ವಿಮಾ ಹಣಕ್ಕೆ ಕ್ಷೇಮ್ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಗೆ ಸಾವಿನ ಕುರಿತು ಅನುಮಾನ ಹುಟ್ಟಿದ್ದು, ಪೊಲೀಸರ ಗಮನಕ್ಕೆ ತಂದಿತ್ತು. ತನಿಖೆ ವೇಳೆ ಇಬ್ಬರು ಪುತ್ರರು ಅಸಲಿ ವಿಚಾರ ಬಾಯಿ ಬಿಟ್ಟಿದ್ದಾರೆ. ‘ಮೊದಲಿಗೆ ನಾಗರಹಾವನ್ನು ತಂದು ಕಚ್ಚಿಸಲು ಯತ್ನಿಸಿದ್ದೆವು. ಅದು ವಿಫಲವಾದಾಗ, 1 ವಾರ ಬಳಿಕ ಅತ್ಯಂತ ವಿಷಪೂರಿತ ಕಟ್ಟುಹಾವು ತರಿಸಿ, ಹಾವನ್ನು ತಂದೆ ಕುತ್ತಿಗೆಗೆ ಕಚ್ಚಿಸಿ, ಹಾವನ್ನೂ ಕೊಂದೆವು’ ಎಂದಿದ್ದಾರೆ.






