ಶಿಕ್ಷಣ

2024-25ನೇ ಸಾಲಿನಿಂದ 3 ವರ್ಷದ ಪದವಿ ಮರು ಜಾರಿ,4 ವರ್ಷದ ಕೋರ್ಸ್ ರದ್ದು:ಉನ್ನತ ಶಿಕ್ಷಣ ಇಲಾಖೆ ಆದೇಶ

Views: 79

ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಸಿನಂತೆ 2024-25ನೇ ಸಾಲಿನಿಂದ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ ರಾಜ್ಯದಲ್ಲಿ ನಾಲ್ಕು ವರ್ಷಗಳ ಪದವಿ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಳಿಸಲು ಆಯೋಗವನ್ನು ರಚಿಸಲಾಗಿದೆ. ಈ ಆಯೋಗದ ಶಿಫಾರಸಿನಂತೆ ನಾಲ್ಕು ವರ್ಷಗಳ ಪದವಿ ರದ್ದುಗೊಳಿಸಿ, ಈ ಹಿಂದಿನಂತೆ ಮೂರು ವರ್ಷಗಳ ಪದವಿ ಮುಂದುವರೆಸಲು ಆದೇಶಿಸಲಾಗಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗದ ಮುಖ್ಯಸ್ಥ ಪ್ರೊ.ಸುಖದೇವ್ ಥೋರಟ್ ಅವರು ರಾಜ್ಯದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಡೀನ್‌ಗಳು, ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಣ ತಜ್ಞರ ಜೊತೆ ಮೂರು ತಿಂಗಳುಗಳ ಕಾಲ ನಿರಂತರ ಸಭೆ ನಡೆಸಿ, ಸಮಾಲೋಚಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರ ಆಧಾರದ ಮೇಲೆ ನಾಲ್ಕು ವರ್ಷಗಳ ಪದವಿ ರದ್ದುಗೊಳಿಸಿ ಮೂರು ವರ್ಷಗಳ ಪದವಿ ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯಲ್ಲಿದೆ. ಈ ಅವಧಿಯಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆದವರು ಮೂರು ವರ್ಷಗಳ ಪದವಿ ಪೂರ್ಣಗೊಳಿಸಿದ ಬಳಿಕ ಇಚ್ಚಿಸಿದಲ್ಲಿ ನಾಲ್ಕನೇ ವರ್ಷದ ಆನರ್ಸ್‌ ಪದವಿಗೆ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳ ಬೇಡಿಕೆ, ಕಾಲೇಜುಗಳ ಮೂಲಸೌಕರ್ಯಗಳನ್ನು ಪರಿಗಣಿಸಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಶಿಕ್ಷಣ ಇಲಾಖೆ ಆದೇಶದಲ್ಲಿ ಸೂಚಿಸಿದೆ. ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಕೋರ್ಸ್ ಲಭ್ಯವಿಲ್ಲದಿದ್ದರೆ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಆದೇಶಿಸಿದೆ.

Related Articles

Back to top button
error: Content is protected !!