10ನೇ ತರಗತಿ ಪರೀಕ್ಷೆಯಲ್ಲಿ ಉತ್ತರ ತೋರಿಸಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿತ..!

Views: 283
10ನೇ ತರಗತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸಿದ ವಿದ್ಯಾರ್ಥಿಗೆ ಮೂವರು ಸಹಪಾಠಿಗಳು ಸೇರಿ ಚೂರಿ ಇರಿದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗಳಿಗೆ ಪರೀಕ್ಷೆಯಲ್ಲಿ ಉತ್ತರ ತೋರಿಸಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದಾರೆ.ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಈ ಘಟನೆ ಕುರಿತು ‘ಸಂತ್ರಸ್ತ ಪರೀಕ್ಷೆ ಸಮಯದಲ್ಲಿ ತನ್ನ ಸಹಪಾಠಿಗಳಿಗೆ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ಮೂವರು ಸಹಪಾಠಿಗಳು ಪರೀಕ್ಷೆ ಹಾಲ್ನಿಂದ ಹೊರಬಂದ ತಕ್ಷಣ ಆತನನ್ನು ಥಳಿಸಿದ್ದಾರೆ. ಬಳಿಕ ಚೂರಿಯಿಂದ ಚುಚ್ಚಿದ್ದಾರೆ. ಗಾಯಗೊಂಡ ಸಂತ್ರಸ್ತ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಡಿಸ್ಚಾರ್ಜ್ ಆಗಿದ್ದಾನೆ’ ಎಂದು ತಿಳಿದುಬಂದಿದೆ.
ಕೃತ್ಯವೆಸಗಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಭೀವಂಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 324 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.