ಇತರೆ

ಹುಬ್ಬಳ್ಳಿ :ಅಂಜಲಿ ಹಂತಕ ದಾವಣೆಗೆರೆ ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನ, ಪ್ರಯಾಣಿಕರಿಂದ ಥಳಿತ, ತಪ್ಪಿಸಿಕೊಳ್ಳುವ ಭರದಲ್ಲಿ ಹಳಿಗೆ ಬಿದ್ದು ಗಂಭೀರ ಗಾಯ!

Views: 108

ಹುಬ್ಬಳ್ಳಿ, ಅಂಜಲಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹಂತಕ ಮತ್ತೊಬ್ಬ ಮಹಿಳೆಯೊಬ್ಬರ ಕೊಲೆಗೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ನಿನ್ನೆ ಆರೋಪಿ ವಿಶ್ವ ಅಲಿಯಾಸ್‌‍ ಗಿರೀಶ್‌ ದಾವಣಗೆರೆಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಗಲಾಟೆ ಮಾಡಿ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ತಕ್ಷಣ ಸಹ ಪ್ರಯಾಣಿಕರು ಆತನಿಗೆ ಹಿಗ್ಗಾಮುಗ್ಗ ಥಳಿಸಿದಾಗ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುವ ಭರದಲ್ಲಿ ಹಳಿಬಳಿ ಬಿದ್ದು ಗಾಯಗೊಂಡಿದ್ದಾನೆ.ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಆತನ ಪೂರ್ವಾಪರ ವಿಚಾರಿಸುತ್ತಿದ್ದಾಗ ಈತನೇ ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವ ಎಂಬುದು ಗೊತ್ತಾಗಿದೆ.

ತಕ್ಷಣ ಈ ವಿಷಯವನ್ನು ರೈಲ್ವೆ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ತಿಳಿಸುತ್ತಾರೆ. ರಾತ್ರಿಯೇ ಪೊಲೀಸರು ದಾವಣಗೆರೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ

ಇಂದು ಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್‌‍ ಆಯುಕ್ತೆ ರೇಣುಕಾ ಸುಕುಮಾರ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಡಿಗೇರಿ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನು ರಚನೆ ಮಾಡಿದ್ದೆವು. ನಿನ್ನೆ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಆರೋಪಿ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಆತ ಸದ್ಯ ಕೋಮ ಸ್ಥಿತಿಯಲ್ಲಿದ್ದಾನೆ. ರೈಲಿನಿಂದ ಏಕೆ ಕೆಳಗೆ ಬಿದ್ದ ಎಂಬುದನ್ನು ಆತನ ಹೇಳಿಕೆ ನಂತರವಷ್ಟೇ ತಿಳಿಯಬಹುದಾಗಿದೆ ಎಂದು ಅವರು ತಿಳಿಸಿದರು.

 

 

 

 

 

Related Articles

Back to top button
error: Content is protected !!