ಸ್ವಾಭಿಮಾನ, ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಯತ್ನಾಳ್ ಸೋಲಿಸಲಿ
Views: 29
ಕನ್ನಡ ಕರಾವಳಿ ಸುದ್ದಿ: ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಯತ್ನಾಳ್ ಅವರು ಸ್ವಾಭಿಮಾನ, ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ ಎಂದು ಸಚಿವ ಪಾಟೀಲ್, ಶಾಸಕ ಯತ್ನಾಳ್ ಅವರಿಗೆ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ, ಅವರ ವಿರುದ್ಧ ಟೀಕಾ ಪ್ರಹಾರ ನಡೆಸುವ ಯತ್ನಾಳ್ ಅವರು ಈಗ ಅವರ ನೇತೃತ್ವದಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಾರೆಯೇ? ಅಥವಾ ಬಿಜೆಪಿ ಪರ ಪ್ರಚಾರ ನಡೆಸಿದ್ದೇನೆ ಮರಳಿ ಪಕ್ಷಕ್ಕೆ ತೆಗೆದುಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಕೈವೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ಮಾತು ಎತ್ತಿದರೆ ಸಾಕು ಯಡಿಯೂರಪ್ಪ ಕುಟುಂಬ, ವಿಜಯೇಂದ್ರ ಎಂದು ವಾಗ್ದಾಳಿ ನಡೆಸುವ ಅವರು ಈಗ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೇಗೆ ಬೆಂಬಲ ನೀಡುತ್ತಾರೆ? ಈ ಯತ್ನಾಳರಿಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ ಎಂದರು.
‘ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ, ವಿಜಯೇಂದ್ರ ಉಳಿಸೋ ಕೆಲಸ ಮಾಡುತ್ತಾರೆಂದರೆ ಮಾಡಲಿ, ಆದರೆ ಯತ್ನಾಳ ಏನೇ ಮಾಡಿದರೂ ನಾವೇ ಗೆಲ್ಲುತ್ತೇವೆ, ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ವಿಜಯೇಂದ್ರ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದಿಂದ ನಿಶ್ಚಿತವಾಗಿ ಬದಲಾಗುತ್ತಾರೆ, ವಿಜಯೇಂದ್ರ ಬದಲಾವಣೆ ಆಗೋದು ಯತ್ನಾಳಗೆ ಬೇಕಾಗಿದೆಯೋ, ಇಲ್ಲವೋ? ಅವರು ಅರ್ಥ ಮಾಡಿಕೊಳ್ಳಲಿ ಯತ್ನಾಳ್ ಉದ್ದೇಶ ವಿಜಯೇಂದ್ರ ಉಳಿಸುವುದೇ ಆಗಿದ್ದರೆ ಮಾತು ಮಾತಿಗೆ ಯಡಿಯೂರಪ್ಪ ಮಗ ಎಂದು ಹೇಳುವುದೇಕೆ ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಪ್ರಚಾರ ಮಾಡಿ ವಾಪಸ್ ಬಿಜೆಪಿಗೆ ಹೋಗುವ ಯೋಚನೆಯಲ್ಲಿ ಯತ್ನಾಳ್ ಇದ್ದಾರೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೇನೆ ಎಂದು ಹೇಳಿ ಪುನ: ಬಿಜೆಪಿ ನಾಯಕರಿಗೆ ಕೈವೊಡ್ಡಿ ಪಕ್ಷಕ್ಕೆ ಮರಳುವ ಪ್ಲಾನ್ ಮಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.






