ಧಾರ್ಮಿಕ

ಶಬರಿಮಲೆ ದೇಗುಲದಲ್ಲಿ ಯಾತ್ರಿಕರ ನೂಕುನುಗ್ಗಲು:ಭಕ್ತರಿಗೆ ಉತ್ತಮ ಸೌಲಭ್ಯ ವಿಫಲ, ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ

Views: 0

ತಿರುವನಂತಪುರಂ ಡಿಸೆಂಬರ್ 12: ಶಬರಿಮಲೆ ಸೀಸನ್ ಆರಂಭವಾಗಿದ್ದು ದೇಗುಲದಲ್ಲಿ ಯಾತ್ರಿಕರ ನೂಕುನುಗ್ಗಲು ಹೆಚ್ಚಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ಸುಲಭವಾಗಿ ದೇವರ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಗಂಟೆಗಟ್ಟಲೆ ಕಾದರೂ ಅಯ್ಯಪ್ಪನ ದರ್ಶವಿಲ್ಲದೆ ಇರುವುದು ಕಂಡು ಬರುತ್ತಿದೆ.

ಇದರಿಂದ ಬಿಜೆಪಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ದೇಗುಲದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಚಿವರ ತಂಡವನ್ನು ಪಂಬಾಗೆ ಕಳುಹಿಸುವಂತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವನ್ನು ಒತ್ತಾಯಿಸಿದೆ. ‘ಸಚಿವರು ಪಂಬಾಗೆ ಧಾವಿಸಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಬೇಕು. ದಟ್ಟಣೆ ನಿಯಂತ್ರಿಸಲು ಹಾಗೂ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದಿಷ್ಟ ಜವಾಬ್ದಾರಿ ನೀಡಬೇಕು’ ಎಂದು ವಿಪಕ್ಷ ನಾಯಕ ವಿ ಡಿ ಸತೀಶ ಅವರು ಸಲಹೆ ನೀಡಿದ್ದಾರೆ

ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆಯನ್ನು ಕೊಟ್ಟಿದೆ. ಕಳೆದ ಹಲವು ದಿನಗಳಿಂದ ಶಬರಿಮಲೆ ಭಕ್ತಾದಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಕ್ತರಿಗೆ ನೀರು ಕೂಡ ಸಿಗುತ್ತಿಲ್ಲ, ಸರ್ಕಾರ ಈ ರೀತಿ ಕಳಪೆ ನಿರ್ವಹಣೆ ಮುಂದುವರಿಸಿದರೆ ನಮ್ಮ ಪಕ್ಷ ನೇರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿರೋಧ ಪಕ್ಷಗಳ ಆರೋಪ

ಆದರೆ ವಿರೋಧ ಪಕ್ಷಗಳ ಆರೋಪಗಳನ್ನು ಸರ್ಕಾರ ತಳ್ಳಿಹಾಕಿದೆ. ದೇಗುಲದಲ್ಲಿ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಮತ್ತು ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಹೇಳಿದ್ದಾರೆ. ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಬರುತ್ತಾರೆ. ಆದರೆ ಗರಿಷ್ಠ 80,000 ಮಂದಿಗೆ ದರ್ಶನಕ್ಕೆ ಮಾತ್ರ ಅವಕಾಶವಿದೆ. “ಯಾತ್ರಿಗಳು ಗೊತ್ತುಪಡಿಸಿದ ಪ್ರವೇಶ ಬಿಂದುಗಳನ್ನು ಹೊರತುಪಡಿಸಿ ಬೇರೆ ಬೇರೆ ಸ್ಥಳಗಳ ಮೂಲಕ ಬೆಟ್ಟವನ್ನು ಹತ್ತುತ್ತಿದ್ದಾರೆ. ನಾವು ಯಾತ್ರಾರ್ಥಿಗಳನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವಿಲ್ಲ. ಆದರೆ ಈಗ ಅದೆಲ್ಲವೂ ನಿಯಂತ್ರಣಕ್ಕೆ ತರಲಾಗಿದೆ” ಎಂದು ಸಚಿವರು ಹೇಳಿದರು.

ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಮತ್ತು ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಆಡಳಿತದೊಂದಿಗೆ ಸಹಕರಿಸುವಂತೆ ಸರ್ಕಾರ ಪ್ರತಿಪಕ್ಷಗಳಿಗೆ ಮನವಿ ಮಾಡಿದೆ. ಭಕ್ತಾದಿಗಳ ನೂಕುನುಗ್ಗಲು ಹಿನ್ನೆಲೆಯಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ದರ್ಶನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲು ಟಿಡಿಬಿ ಭಾನುವಾರ ನಿರ್ಧರಿಸಿತ್ತು. ಮಂಡಳಿಯು ದಿನದ ದ್ವಿತೀಯಾರ್ಧದಲ್ಲಿ ಮಧ್ಯಾಹ್ನ 4 ರಿಂದ ರಾತ್ರಿ 11 ರವರೆಗೆ ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನದ ಸಮಯವನ್ನು ಮಾರ್ಪಡಿಸಿದೆ. ಸರತಿ ಸಾಲಿನಲ್ಲಿ ನಿಂತಿರುವ ಯಾತ್ರಾರ್ಥಿಗಳಿಗೆ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ.

ಶಬರಿ ಮಲೆಯಲ್ಲಿ ಹೆಚ್ಚಾದ ಭಕ್ತರ ಸಂಖ್ಯೆ

ನೂಕುನುಗ್ಗಲು ಹಿನ್ನೆಲೆಯಲ್ಲಿ ದಿನಕ್ಕೆ 75,000 ಭಕ್ತರ ಸಂಖ್ಯೆಯನ್ನು ನಿರ್ಬಂಧಿಸುವಂತೆ ಕೇರಳ ಪೊಲೀಸರು ಟಿಡಿಬಿಗೆ ಮನವಿ ಮಾಡಿದರು. ಆದರೆ ತೀರ್ಥೋದ್ಭವದ ಪ್ರಸ್ತುತ ಹಂತದಲ್ಲಿ, ಭಕ್ತರ ಸಂಖ್ಯೆಯು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ದಿನಕ್ಕೆ 90,000 ಮತ್ತು ಸ್ಪಾಟ್ ಬುಕಿಂಗ್ ಮೂಲಕ 30,000 ಬುಕಿಂಗ್‌ಗಳಿಗೆ ಏರಿಕೆಯಾಗಿದೆ. ಇದು ಟಿಡಿಬಿ ಹಾಗೂ ಪೊಲೀಸರ ನಡುವೆ ಮನಸ್ತಾಪಕ್ಕೆ ಗುರಿಯಾಗಿದೆ.

ನಿತ್ಯ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಸಂಖ್ಯೆಯೂ ಹೆಚ್ಚುತ್ತಿದ್ದು, ಅವರನ್ನು ಪತಿನೆಟ್ಟಂಪಾಡಿ (18 ಪವಿತ್ರ ಮೆಟ್ಟಿಲುಗಳು) ಹತ್ತುವಂತೆ ಮಾಡುವುದು ಕಠಿಣ ಎಂದು ದೇಗುಲದಲ್ಲಿ ನಿಯೋಜಿಸಲಾದ ಪೊಲೀಸರು ಹೇಳುತ್ತಾರೆ.

ನವೆಂಬರ್ 16 ರಂದು ಪ್ರಾರಂಭವಾದ ವಾರ್ಷಿಕ 41 ದಿನಗಳ ಮಂಡಲ-ಮಕರವಿಳಕ್ಕು ಯಾತ್ರೆಯು ಭಾರಿ ಜನದಟ್ಟಣೆಗೆ ಸಾಕ್ಷಿಯಾಗಿದೆ. ಸನ್ನಿಧಾನಂನಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಡೈನಾಮಿಕ್ ಕ್ಯೂ ನಿಯಂತ್ರಣ ವ್ಯವಸ್ಥೆಯನ್ನು ಈ ಋತುವಿನಲ್ಲಿ ಜಾರಿಗೆ ತರಲಾಗಿದೆ. ದೇಗುಲದಲ್ಲಿ ಕಳೆದೆರಡು ದಿನಗಳಿಂದ ಭಾರಿ ಜನದಟ್ಟಣೆ ಕಂಡು ಬಂದಿದ್ದು, 14 ಗಂಟೆಗಳ ಕಾಲ ಯಾತ್ರಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಸರತಿ ಸಾಲಿನಲ್ಲಿ ಸೌಲಭ್ಯಗಳ ಕೊರತೆ ಬಗ್ಗೆ ಹಲವು ಭಕ್ತರು ದೂರಿದ್ದಾರೆ.

ಒಂದಲ್ಲಾ ಎರಡಲ್ಲಾ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದರೆ ಅದಕ್ಕೆ ತಕ್ಕಂತೆ ವ್ಯವಸ್ಥೆಗಳು ಇರಬೇಕು. ಮೂಲಭೂತ ಸೌಕರ್ಯಗಳಿಲ್ಲದೇ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ಸಮಸ್ಯೆಯಾಗುತ್ತಿದೆ. ಹೀಗಾಗಿ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿರ್ಬಂಧಿಸಲು ಸ್ಪಾಟ್ ಬುಕ್ಕಿಂಗ್ ಅನ್ನು ನಿಲ್ಲಿಸಬೇಕು ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ. ಭಕ್ತಾದಿಗಳ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಮತ್ತು ಟಿಡಿಬಿ ಜಗಳವಾಡುತ್ತಿದೆ. ತಿರುಪತಿ ಮಾದರಿ ಸರತಿ ಸಾಲು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ನಿರ್ವಾಹಕರು ದೂರುತ್ತಿದ್ದಾರೆ.

Related Articles

Back to top button
error: Content is protected !!