ವಿಧಾನ ಪರಿಷತ್ ಚುನಾವಣೆ: ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ನಿರಾಸಕ್ತಿ?

Views: 1
ರಾಜ್ಯ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಶಿಕ್ಷಕರು ಹಾಗೂ ಪದವೀಧರರು ಆಸಕ್ತಿಯನ್ನೇ ತೋರಿಸುತ್ತಿಲ್ಲ.
ಪದವೀಧರರು ನಿರೀಕ್ಷಿತ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿಕೊಂಡಿಲ್ಲ. ಪದವಿ ಪ್ರಮಾಣ ಪತ್ರವನ್ನು ತಾಲೂಕು ಕಚೇರಿಗೆ ತೆಗೆದುಕೊಂಡು ಹೋಗಬೇಕು. ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬೇಕು. ಇದರ ಜತೆಗೆ ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಹೀಗೆ ನಿಯಮವೂ ಸ್ವಲ್ಪ ಕಠಿನವಿದ್ದರಿಂದ ಯುವ ಪದವೀಧರರು ನೋಂದಾಯಿಸಿಕೊಳ್ಳಲು ಮುಂದೆ ಬಂದಿಲ್ಲ. ಜಿಲ್ಲಾಡಳಿತದಿಂದ ಈ ಬಗ್ಗೆ ಪ್ರಚಾರ ಪ್ರಕ್ರಿಯೆ ನಡೆಸಿದ್ದರೂ ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳು ಯುವ ಪದವೀಧರರಲ್ಲಿ ಅರಿವು, ಜಾಗೃತಿ ಮೂಡಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಕನಿಷ್ಠ 25 ಸಾವಿರ ಪದವೀಧರರು ನೋಂದಾಯಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಅಂತಿಮವಾಗಿ ನೋಂದಾಯಿಸಿಕೊಂಡಿದ್ದು 10,840 ಪದವೀಧರರು ಮಾತ್ರ ನೋಂದಾಯಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವ ಪ್ರಕ್ರಿಯೆ ನ.6ಕ್ಕೆ ಪೂರ್ಣಗೊಂಡಿದ್ದು ಜಿಲ್ಲೆಯಲ್ಲಿ 10,840 ಪದವೀಧರರು ಹಾಗೂ 2,188 ಶಿಕ್ಷಕರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಜಿಲ್ಲೆಯ ಪದವೀಧರರು ಹಾಗೂ ಶಿಕ್ಷಕರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಪದವೀಧರರು, ಶಿಕ್ಷಕರು ನಿರೀಕ್ಷಿತ ಮಟ್ಟದಲ್ಲಿ ನೋಂದಾಯಿಸಿಕೊಂಡಿಲ್ಲ.
ಜಿಲ್ಲೆಯ 10 ಹೋಬಳಿಗಳಲ್ಲಿ ಉಡುಪಿ ಹೋಬಳಿಯಲ್ಲೇ ಶೇ.50ರಷ್ಟು ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೈಂದೂರಿನಿಂದ 532, ವಂಡ್ಸೆಯಿಂದ 340, ಕುಂದಾಪುರದಿಂದ 694, ಕೋಟದಿಂದ 350, ಬ್ರಹ್ಮಾವರದಿಂದ 524, ಉಡುಪಿಯಿಂದ 5,853, ಕಾಪುವಿನಲ್ಲಿ 1,006, ಹೆಬ್ರಿಯಲ್ಲಿ 209, ಅಜೆಕಾರ್‌ನಲ್ಲಿ 211 ಹಾಗೂ ಕಾರ್ಕಳದಲ್ಲಿ 1,121 ಪದವೀಧರರು ಸೂಕ್ತ ದಾಖಲೆ ಒದಗಿಸಿಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದಾರೆ.
ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಂದೂರಿನ 210, ವಂಡ್ಸೆಯ 119, ಕುಂದಾಪುರದ 249, ಕೋಟದ 91, ಬ್ರಹ್ಮಾವರದ 129, ಉಡುಪಿಯ 708, ಕಾಪುವಿನ 203, ಹೆಬ್ರಿಯ 57, ಅಜೆಕಾರ್‌ನ 35 ಹಾಗೂ ಕಾರ್ಕಳದ 387 ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೂಕ್ತ ದಾಖಲೆ ಒದಗಿಸಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರ ಕ್ಷೇತ್ರಗಳಿಗೆ 2018ರಲ್ಲಿನಡೆದ ಚುನಾವಣೆಗೆ ಹೋಲಿಸಿದರೆ, ಇದುವರೆಗೆ ಜಿಲ್ಲೆಯಲ್ಲಿಮತದಾರರ ಪಟ್ಟಿಗೆ ಹೆಸರು ಸೇರಪಡೆಗೆ ಸಲ್ಲಿಕೆ ಆಗಿರುವ ಅರ್ಜಿಗಳ ಪ್ರಮಾಣ ತೀರಾ ಕಡಿಮೆ ಇದೆ.
2018ರ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15,494 ಮಂದಿ ಮತದಾರರಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 7,140 ಮತದಾರರಿದ್ದರು. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಸಲ ಮತದಾರರ ನೋಂದಣಿ ಪ್ರಮಾಣ ತೀರಾ ಕಡಿಮೆ ಇದೆ. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ.6ರ ಕೊನೆಯ ದಿನಾಂಕ ಆಗಿತ್ತು.
ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 2018ರವರೆಗೂ ಬಿಜೆಪಿ ಪಾರಮ್ಯವಿತ್ತು. 2018ರಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ ಅವರು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ 25,250 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿನೇಶ್ ಅವರನ್ನು ಮಣಿಸಿದ್ದರು.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಗಣೇಶ್ ಕಾರ್ಣಿಕ್, ಕಾಂಗ್ರೆಸ್‌ನ ಕೆ.ಕೆ.ಮಂಜುನಾಥ್, ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ, ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಯಾವ ಅಭ್ಯರ್ಥಿಗಳೂ ಗೆಲುವಿಗೆ ಅಗತ್ಯ ಇರುವಷ್ಟು ಮತ ಪಡೆದಿರಲಿಲ್ಲ. ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಬಳಿಕ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ 8,647 ಮತ ಪಡೆದು ಬಿಜೆಪಿಯ ಗಣೇಶ್ ಕಾರ್ಣಿಕ್ ಅವರನ್ನು ಸೋಲಿಸಿದ್ದರು.
ನೈರುತ್ಯ ಶಿಕ್ಷಕ ಕ್ಷೇತ್ರಕ್ಕೆ ಕಾಂಗ್ರೆಸ್ ಕೆ.ಕೆ.ಮಂಜುನಾಥ್ ಅವರಿಗೆ ಮೂರನೇ ಸಲ ಟಿಕೆಟ್ ನೀಡಿದೆ. ಪದವೀಧರ ಕ್ಷೇತ್ರದಲ್ಲಿ ಕಳೆದ ಸಲ ಬಿಜೆಪಿಯಿಂದ ಗೆದ್ದಿದ್ದ ಆಯನೂರು ಮಂಜುನಾಥ್ ಈಗ ಕಾಂಗ್ರೆಸ್ ಸೇರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ– ಹಾಗೂ ಜೆಡಿಎಸ್ ವಿಧಾನ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುತ್ತವೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡರೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಸಲ ಗೆದ್ದಿದ್ದ ಎಸ್.ಎಲ್ ಭೋಜೇಗೌಡ ಅವರಿಗೆ ಟಿಕೆಟ್ ಸಿಗುತ್ತದೋ ಅಥವಾ ಬಿಜೆಪಿಯಿಂದ ಈ ಹಿಂದೆ ಎರಡು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಗಣೇಶ್ ಕಾರ್ಣಿಕ್ ಅವರಿಗೇ ಟಿಕೆಟ್ ಸಿಗುತ್ತದೋ ಎಂಬುದು ಕುತೂಹಲ ಮೂಡಿಸಿದೆ.






