ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಆರೋಪ: ಬ್ರಹ್ಮಾವರ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ
Views: 111
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಹಾಗೂ ಮನೆಯವರ ಮೇಲೆ ಬ್ರಹ್ಮಾವರ ಪೊಲೀಸರು ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಬುಧವಾರ ಬ್ರಹ್ಮಾವರ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಅಕ್ಷತಾ ಪೂಜಾರಿ ನೀಡಿದ ದೂರನ್ನು ದಾಖಲಿಸದೆ, ತಾಯಿ ಮತ್ತು ಮಗಳ ಮೇಲೆಯೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ತಾರತಮ್ಯ ನೀತಿ ಅನುಸರಿಸಿ, ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅಕ್ಷತಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದರು. ದೌರ್ಜನ್ಯ ಎಸಗಿದವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಬಿಲ್ಲವ ಸಮಾಜದ ಮುಖಂಡರು, ವಿವಿಧ ಪಕ್ಷಗಳ ಪ್ರಮುಖರು, ಮಹಿಳಾ ಆಯೋಗ, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು. ಎಸ್.ಪಿ., ಡಿವೈಎಸ್ , ಎಡಿಸಿ ಮೊದಲಾದವರು ಭೇಟಿ ಮನವೊಲಿಸಲು ಪ್ರಯತ್ನಿಸಿದರು. ಅಕ್ಷತಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ಏನಿದು ಘಟನೆ ?
2014ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ನೀಡಿವಂತೆ ಆರೋಪಿ ಆಶಿಕ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಆರೋಪಿ ನ್ಯಾಯಾಯಲಕ್ಕೆ ಹಾಜರಾಗದೆ, ಇರುವುದರಿಂದ ಹಣವನ್ನು ಕಟ್ಟದೆ ಬಂಧಿಸುವಂತೆ ಆರೋಪಿ ಸಂಬಂಧಿಕರ ಆದೇಶವಾಗಿತ್ತು. ಉಪ್ಪೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಇರುವ ಅನುಮಾನದ ಮೇರೆಗೆ ಬ್ರಹ್ಮಾವರ ಪೊಲೀಸರು ತೆರಳಿದ್ದರು. ಕೋರ್ಟ್ ಅಮೀನರಿಲ್ಲದೆ, ಮಹಿಳಾ ಸಿಬಂದಿ ಇಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿ ಹಾಗೂ ಮನೆಯವರ ಮೇಲೆ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.






