ಶಿಕ್ಷಣ

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಸುಜ್ಞಾನ ಪದವಿ ಪೂರ್ವ ಕಾಲೇಜು: ಸಂಭ್ರಮದ  ವಾರ್ಷಿಕೋತ್ಸವ ಸಮಾರಂಭ “ವರ್ಷಾ 2024″  

Views: 589

ಕುಂದಾಪುರ: ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ “ವರ್ಷಾ 2024″ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ ಉದ್ಘಾಟಿಸಿದರು.

ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಸುಜ್ಞಾನ ಎಜುಕೇಶನ್ ಟ್ರಸ್ಟ್ ಸಾಧನೆಗೆ ಶ್ಲಾಘನೀಯ, ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಮಟ್ಟದ ಸಾಧನೆ ಮಾಡುತ್ತಿರುವ ಮಕ್ಕಳನ್ನು ಹುರಿದುಂಬಿಸಿ, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕಾಯಕದೊಂದಿಗೆ ಉತ್ತಮ ವೇದಿಕೆ ಕೊಟ್ಟಾಗ ಯಾವ ಮಕ್ಕಳು ಹಿಂದುಳಿಯುವುದಿಲ್ಲ, ಮಕ್ಕಳೇ ನಿಜವಾದ ಆಸ್ತಿ ಎಂದು ತಿಳಿದು ಶಿಕ್ಷಣ ನೀಡುತ್ತಾ ಬಂದಾಗ ವಿದ್ಯಾರ್ಥಿಗಳು ಅದನ್ನು ಸದ್ ವಿನಿಯೋಗ ಮಾಡಿಕೊಂಡಾಗ ಶಿಕ್ಷಣ ಸಂಸ್ಥೆ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಕೋ-ಆರ್ಡಿನೇಟರ್ ಡಾ. ಗಣನಾಥ ಎಕ್ಕಾರ್ ಮಾತನಾಡಿ, ರಾಜ್ಯದಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವ ಈ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಶಿಕ್ಷಣ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಲ್ಲ ಜ್ಞಾನ, ಕೌಶಲ್ಯ, ಆರೋಗ್ಯ, ಮೌಲ್ಯ ಮತ್ತು ಮಾನವೀಯ ವ್ಯಕ್ತಿತ್ವ ವಿಕಾಸನ ಆದಾಗ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಥಮ ದರ್ಜೆ ಗುತ್ತಿಗೆದಾರರಾದ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ನಮ್ಮೂರಿಗೆ ಕೀರ್ತಿ ತಂದಿದ್ದಾರೆ ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. 

ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕಳೆದ ಸಾಲಿನಲ್ಲಿ ಜೆ.ಇ. ಇ. ಮತ್ತು ನೀಟ್ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ಚಿರಾಗ್, ನಿಶಾ, ನಾಗರಾಜ್ ಉಪ್ಪಾರ್, ವಿನುತಾ, ಅನನ್ಯ ಉಡುಪ, ಸುಜನ್, ಸನ್ನಿಧಿ, ವರುಣ್ ಕೆಪಿ, ಶಶಾಂಕ್ ಶೆಟ್ಟಿ, ಆಶಿತಾ, ನಿರ್ಮಿತ, ರಿತಿಶಾ ಶೆಟ್ಟಿ, ರುಮೇಶ್ ಶೇಖ್, ರಕ್ಷಾ ಪೂಜಾರಿ, ಸನ್ಮಾನ್, ಆಕಾಶ್ ಶೆಟ್ಟಿ, ಸಮೃದ್ಧಿ, ಸಾನ್ವಿ ಇನ್ನಿತರ ವಿದ್ಯಾರ್ಥಿಗಳಿಗೆ ಒಟ್ಟು ಲಕ್ಷಾಂತರ ರೂಪಾಯಿ ನಗದು ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಸತೀಶ್ ಕುಮಾರ್ ಮತ್ತು ಉಪನ್ಯಾಸಕಿ ಸಂಗೀತ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸಪ್ತಮಿ ಸ್ವಾಗತಿಸಿ, ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ವಂದಿಸಿದರು.ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button
error: Content is protected !!