ವಿಜಯೇಂದ್ರನದ್ದು ಅತ್ತೂ, ಕರೆದು ಔತಣ ಮಾಡಿಸಿಕೊಂಡ ಸ್ಥಿತಿ: ಜಗದೀಶ್ ಶೆಟ್ಟರ್

Views: 0
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಅವರ ನೇಮಕದ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ವಿಜಯೇಂದ್ರ ಅವರದ್ದು ಅತ್ತೂ ಕರೆದು ಔತಣ ಮಾಡಿಸಿಕೊಂಡಂತಹ ಸ್ಥಿತಿ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನಸಭಾ ಚುನಾವಣೆ ಮುಗಿದ 6 ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿರಲಿಲ್ಲ. ಅತ್ತು ಕರೆದು ಅಧ್ಯಕ್ಷರನ್ನಾಗಿ ಮಾಡಿರುವ ತರಹ ಕಾಣಿಸುತ್ತಿದೆ. ಒಂದು ರಾಜಕೀಯ ಪಕ್ಷವಾಗಿ ತಕ್ಷಣ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ. ಈಗ ಯಾಕೆ ಆಯ್ಕೆ ಮಾಡಿದ್ರು? ಇದನ್ನೆಲ್ಲಾ ನೋಡಿದ್ರೆ ಬಿಜೆಪಿ ಫೇಲ್ ಆಗಿದೆ. ಬಿಜೆಪಿಯವರು ಭ್ರಮೆಯಲ್ಲಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್‌ನಲ್ಲಿ ಇದ್ದೀನಿ. ಅಧ್ಯಕ್ಷರ ಆಯ್ಕೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಬಂದು ಬಲಾಢ್ಯವಾಗಿ ಬೆಳೆದಿದೆ. ಬಿಜೆಪಿಯವರು ಈಗಾಗಲೇ ಬೇರೆ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. 50-60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡುವುದು ಭ್ರಮೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.






