ಲೋಕಸಭಾ ಚುನಾವಣೆ: ಉಡುಪಿ- ಚಿಕ್ಕಮಗಳೂರಿಗೆ ಸಿಟಿ ರವಿ, ಶೋಭಾ ಬೆಂಗಳೂರು ಉತ್ತರಕ್ಕೆ?

Views: 0
ವಿಧಾನಸಭೆ ಚುನಾವಣೆ ಕಾವು ಮುಗಿಯುತ್ತಿದ್ದಂತೆ ಮಲೆನಾಡು – ಕರಾವಳಿಯನ್ನು ಒಳಗೊಂಡಿರುವ ಉಡುಪಿ – ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಲೋಕ ಸಮರ ನಿಧಾನವಾಗಿ ಚುರುಕು ಪಡೆದುಕೊಳ್ಳುತ್ತಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ವಶ ಮಾಡಿಕೊಂಡಿದ್ದು, ಇದೇ ಹುಮ್ಮಸ್ಸನ್ನು ಲೋಕಸಭೆ ಚುನಾವಣೆಯಲ್ಲಿಯೂ ತೋರಲು ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದರೆ, ಅತ್ತ ಕಮಲ ಪಾಳಯದಲ್ಲೂ ಚಟುವಟಿಕೆಗಳು ಬಿರುಸುಗೊಂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡಿರುವಂತೆ ಲೋಕಸಭಾ ಚುನಾವಣಾ ಟಿಕೆಟ್ ನೀಡುವಲ್ಲಿ ಅಂತಹದ್ದೇ ಕಾರ್ಯತಂತ್ರ ರೂಪಿಸಲು ವರಿಷ್ಠರು ಮುಂದಾಗಿದ್ದು, ಕಠಿಣ ಜಾತಿ ಸಮೀಕರಣದ ನಿರ್ಧಾರದಲ್ಲಿ ಒಕ್ಕಲಿಗ ನಾಯಕನನ್ನು ಬಳಸಿಕೊಳ್ಳಲು ಬಿಜೆಪಿ ಗೇಮ್ ಪ್ಲಾನ್ ಮಾಡಿಕೊಂಡಿದೆ.
ಈಗಾಗಲೇ ಹಲವು ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಸಂದೇಶ ನೀಡುವ ವರಿಷ್ಠರು ಹೊಸ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಈ ಹಂತದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಅವರ ಸ್ಥಾನಕ್ಕೆ ಒಕ್ಕಲಿಗ ನಾಯಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಅವರು ಬೆಂಗಳೂರಿಗೆ ಬರುತ್ತಿರುವುದರಿಂದ ಖಾಲಿಯಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಮತ್ತೊಬ್ಬ ಒಕ್ಕಲಿಗ ನಾಯಕ ಸಿಟಿ ರವಿ ಅವರನ್ನು ಕಣಕ್ಕೆ ಇಳಿಸಲು ಯೋಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಟಿ ರವಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿ, ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸುವ ಉದ್ದೇಶ ವರಿಷ್ಠರ ತೀರ್ಮಾನವಾಗಿತ್ತು,
ಬದಲಾದ ಸನ್ನಿವೇಶದಲ್ಲಿ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷರ ಸ್ಥಾನ ನೀಡಲಾಗಿದೆ.
ಸಿಟಿ ರವಿ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಹಾಗೂ ಅಸಮಾಧಾನಿತ ಚಿಕ್ಕಮಗಳೂರು ಒಕ್ಕಲಿಗ ಮತದಾರರನ್ನು ಸಮಾಧಾನ ಪಡಿಸಲು ಉದ್ದೇಶದಿಂದ ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡುವುದು ವರಿಷ್ಠರು ಉದ್ದೇಶವಾಗಿದೆ.
ಇನ್ನೂ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಬಹುದು ಎಂಬ ಉದ್ದೇಶದಿಂದ ಕ್ಷೇತ್ರ ಬದಲಿಸಿ ಶೋಭಾಗೆ ಬೆಂಗಳೂರು ಉತ್ತರಕ್ಕೆ ಕರೆಸಿಕೊಂಡು ಇನ್ನೂ ಒಕ್ಕಲಿಗ ಮತವನ್ನು ಉಳಿಸಿಕೊಳ್ಳಬಹುದು ಎಂಬುದು ವರಿಷ್ಠರ ಚಿಂತನೆಯಾಗಿದೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಈ ಹುದ್ದೆಯ ಆಕಾಂಕ್ಷಿಯಾಗಿದ್ದ ಒಕ್ಕಲಿಗ ಸಮುದಾಯದ ಸಿಟಿ ರವಿ ಅವರಿಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪಕ್ಕೆ ಈ ನಿರ್ಧಾರದಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬುವುದೇ ವರಿಷ್ಠರ ಚಿಂತನೆ
ರಾಜಕೀಯವಾಗಿ ಅತಂತ್ರರಾಗಿದ್ದ ಇಂದಿರಾ ಗಾಂಧಿಗೆ 1978ರಲ್ಲಿ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ. ಆ ಸಂದರ್ಭದಲ್ಲಿ ಸಂಸದರಾಗಿದ್ದ ಡಿ ಬಿ ಚಂದ್ರೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಇಂದಿರಾ ಗಾಂಧಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇಂದಿರಾ ಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಸ್ಪರ್ಧಿಸಿ ಪರಾಭವಗೊಂಡಿದ್ದರು. 1952ರಲ್ಲಿ ಲೋಕಸಭೆ ಕ್ಷೇತ್ರ ರಚನೆಯಾಗಿ 2009ರ ಚುನಾವಣೆಯವರೆಗೂ ಅಸ್ತಿತ್ವದಲ್ಲಿದ್ದ ಚಿಕ್ಕಮಗಳೂರು ಕ್ಷೇತ್ರ ಬಳಿಕ ಉಡುಪಿ – ಚಿಕ್ಕಮಗಳೂರು ಕ್ಷೇತ್ರವಾಗಿ ಬದಲಾವಣೆಯಾಯಿತು. ಆ ಬಳಿಕ ಚಿಕ್ಕಮಗಳೂರು ಜಿಲ್ಲೆಯವರಿಗೆ ಸ್ಪರ್ಧಿಸಲು ಅವಕಾಶವೇ ಸಿಕ್ಕಿಲ್ಲ, ಉಡುಪಿ ಜಿಲ್ಲೆಯವರಿಗೆ ಮಣೆ ಹಾಕುತ್ತ ಬಂದಿರುವುದು ಕಾಫಿನಾಡಿಗೆ ನಿರಾಸೆ ತರಿಸಿದೆ.
ಕ್ಷೇತ್ರ ಮರು ವಿಂಗಡನೆಗೂ ಮೊದಲು ಡಿ ಕೆ ತಾರಾದೇವಿ, ಡಿ ಬಿ ಚಂದ್ರೇಗೌಡ ಎರಡು ಬಾರಿ ಹಾಗೂ ಡಿ ಸಿ ಶ್ರೀಕಂಠಪ್ಪ ಅವರಂತಹ ನಾಯಕರನ್ನು ಮೂರು ಬಾರಿ ಲೋಕಸಭೆಗೆ ಕಳುಹಿಸಿದ ಕೀರ್ತಿ ಕ್ಷೇತ್ರದ್ದು. ಆದರೆ, ಕ್ಷೇತ್ರ ಮರು ವಿಂಗಡಣೆಯ ಬಳಿಕ ಲೋಕ ಕಣದಲ್ಲಿ ಸ್ಪರ್ಧಿಸಲು ಜಿಲ್ಲೆಯವರಿಗೆ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯಾದರೂ ಜಿಲ್ಲೆಯವರಿಗೆ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಹಲವು ಮುಖಂಡರಿಗೆ ಇದೆ.
ಇದಲ್ಲದೆ ಕಾಂಗ್ರೆಸ್ ನಿಂದು ಬಿಜೆಪಿಗೆ ಬಂದಿದ್ದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಹ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ.







