ಲೈಂಗಿಕ ಬೇಡಿಕೆಗೆ ಒಪ್ಪದಿದ್ದಕ್ಕೆ 4 ವರ್ಷದ ಹೆಂಡತಿ ತಂಗಿಯ ಮಗನ ಭೀಕರ ಹತ್ಯೆ: ಆರೋಪಿ ಅರೆಸ್ಟ್
Views: 178
ಕನ್ನಡ ಕರಾವಳಿ ಸುದ್ದಿ: ಹೆಂಡತಿಯ ತಂಗಿ ಮಗನನ್ನೆ ಕೊಂದು ವಿಕೃತಿ ಮೆರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಇದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಿಕ್ಕಪೇಟೆಯ ಲೈನ್ ಮನೆಯೊಂದರಲ್ಲಿ ನಡೆದಿರುವ ಮನಕಲಕುವ ಭೀಕರ ಘಟನೆ. ರಾಯಚೂರು ಮೂಲದ ಪಂಪನಗೌಡ ಎಂಬುವವರನ್ನು ಮದುವೆಯಾಗಿದ್ದ ಸುಚಿತ್ರಾ, ಮಾರ್ಚ್ ತಿಂಗಳಲ್ಲಿ ಊರಿನ ಹಬ್ಬಕ್ಕೆಂದು ಮಕ್ಕಳೊಂದಿಗೆ ವಿರಾಜಪೇಟೆಗೆ ಬಂದಿದ್ದರು. ಆದರೆ, ಇಲ್ಲೇ ನೆಲೆಸಿದ್ದ ಸುಚಿತ್ರಾ ಮೇಲೆ ಆಕೆಯ ಅಕ್ಕನ ಗಂಡ ಪ್ರತಾಪ್ ಕಣ್ಣು ಬಿದ್ದಿತ್ತು. ಹಲವು ಬಾರಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಸುಚಿತ್ರಾ ಗರ್ಭಿಣಿಯಾಗಿದ್ದರು. ಆಗಸ್ಟ್ 12 ರ ರಾತ್ರಿ ಮತ್ತೆ ಬಂದ ಪ್ರತಾಪ್ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಸುಚಿತ್ರಾ, ತಾನು ರಾಯಚೂರಿಗೆ ಹೊರಡುವುದಾಗಿ ಹೇಳಿದ್ದಾರೆ. ಇದರಿಂದ ಕೆರಳಿದ ಆರೋಪಿ ಪ್ರತಾಪ್, ‘ನನಗೆ ಸಹರಿಸದಿದ್ದರೆ ನಿನ್ನ ಮಗನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದ.
ಬೆದರಿಕೆಗೆ ಹೆದರಿ ಸುಚಿತ್ರಾ ಮನೆಯಿಂದ ಹೊರಗೆ ಹೋದ ಸಮಯದಲ್ಲೇ, ವಿಕೃತ ಕಾಮುಕ ಪ್ರತಾಪ್ 4 ವರ್ಷದ ಕಂದಮ್ಮ ಚರಣ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಸುಚಿತ್ರಾ ಒಳಗೆ ಬಂದು ನೋಡಿ ಕಿರುಚಾಡಿದಾಗ, ಆಕೆಯ ಮೇಲೆಯೂ ಕೊಡಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಬಳಿಕ ಮತ್ತೊಬ್ಬ ಮಗನೊಂದಿಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸುಚಿತ್ರಾ, ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿರಾಜಪೇಟೆ ನಗರ ಪೊಲೀಸರು ಆರೋಪಿ ಪ್ರತಾಪ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.






