ರೋಹಿಣಿ ಸಿಂಧೂರಿ, ಡಿ.ರೂಪಾ ಮೌನ್ಸಿಲ್ ಜಗಳ: ಸುಪ್ರೀಂಕೋರ್ಟ್ ಮಹತ್ವದ ಸಲಹೆ
Views: 31
ಕನ್ನಡ ಕರಾವಳಿ ಸುದ್ದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌನ್ಸಿಲ್ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಸಲಹೆ ನೀಡಿದೆ.
ಇಬ್ಬರೂ ತಮ್ಮ ನಡುವಿನ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಡಿ.ರೂಪಾ ತಮ್ಮ ವಿರುದ್ಧ ಮಾಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಎದುರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಅವರಿದ್ದ ಪೀಠ ನಡೆಸಿತು. ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಸುದೀರ್ಘ ಜಗಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಇಬ್ಬರೂ ಅತ್ಯುತ್ತಮ ಅಧಿಕಾರಿಗಳು. ಆದರೆ, ಈ ರೀತಿ ನ್ಯಾಯಾಲಯದ ಮೆಟ್ಟಿಲೇರಿ ಜಗಳ ಮಾಡುವ ಮೂಲಕ ಪರಸ್ಪರ ತಮ್ಮ ವೃತ್ತಿ ಜೀವನವನ್ನು (ಕೆರಿಯರ್) ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತು.






