ರಾಜ್ಯದ ಕರಾವಳಿ, ಒಳನಾಡಿನಲ್ಲಿ 3 ದಿನ ಭಾರೀ ಮಳೆ

Views: 132
ಕನ್ನಡ ಕರಾವಳಿ ಸುದ್ದಿ: ಭೂಮಿ ಮೇಲೆ ಹಾಗೂ ಸಮುದ್ರ ಮೇಲ್ಮೈನಲ್ಲಿ ತೀವ್ರರೂಪದ ಹವಾಮಾನ ವೈಪರೀತ್ಯಗಳು ಉಂಟಾಗಿರುವುದರಿಂದ ರಾಜ್ಯದಲ್ಲಿ ಮುಂದಿನ ಮೂರು ದಿನ ಧಾರಾಕಾರ ಮಳೆ ಆಗುವ ಸಾಧ್ಯತೆ ಇದ್ದು, ಕರಾವಳಿ ಹಾಗೂ ಒಳನಾಡು ಸೇರಿ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯದ ಎರಡು ಕಡೆಗಳಲ್ಲಿ ಭೂಮಿಯ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣ ಉಂಟಾಗಿತ್ತು. ಇದೀಗ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಮುಂದಿನ ಮೂರು ದಿನಗಳಲ್ಲಿ ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಕೆಲವಡೆ 150 ಮಿಲಿ ಮೀಟರ್ಗಿಂತಲೂ ಹೆಚ್ಚಿನ ಮಳೆ ನಿರೀಕ್ಷೆ ಇದೆ.
ಜುಲೈ 16 ಮತ್ತು 17 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬರಲಿದ್ದು, ಎರಡು ದಿನ ‘ಆರೆಂಜ್ ಅಲರ್ಟ್ ನೀಡಲಾಗಿದೆ.
ರಾಜಧಾನಿ ಬೆಂಗಳೂರಿಗೆ ಜುಲೈ 18 ಮತ್ತು 19 ರಂದು ಸಾಧಾರಣದಿಂದ ಭಾರೀ ಮಳೆ ಬರಲಿದೆ. ಇದರೊಂದಿಗೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಹ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ನಂತರ ಎರಡು ದಿನ (ಜುಲೈ 19ರವರೆಗೆ) ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ನಂತರ ಮತ್ತೆ ಕರಾವಳಿಯಲ್ಲಿ ಚುರುಕಾಗಲಿದೆ.
ಕರ್ನಾಟಕದ ಒಳನಾಡು ಜಿಲ್ಲೆಗಳಾದ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜುಲೈ 18 ಮತ್ತು 19 ರಂದು ವ್ಯಾಪಕ ಮಳೆ ಆಗಲಿದೆ. ಚಂಡಮಾರುತ ಪ್ರಸರಣದ ಅಬ್ಬರ ಈ ಜಿಲ್ಲೆಗಳ ಮೇಲೂ ಆಗಲಿದ್ದು, ಎರಡು ದಿನ ಭಾರೀ ಮಳೆ ಹಿನ್ನೆಲೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಒಂದು ದಿನ ಮಾತ್ರ ಭಾರೀ ಮಳೆ ಬರಲಿದೆ.






