ರಾಜ್ಯಕ್ಕೆ 4ನೇ,ತಾಲೂಕಿಗೆ ಫಸ್ಟ್ ರ‍್ಯಾಂಕ್ ಪಡೆದಿದ್ದ ಪಿಯುಸಿ ವಿದ್ಯಾರ್ಥಿನಿ ಸಾವು
Views: 78
ಕನ್ನಡ ಕರಾವಳಿ ಸುದ್ದಿ : ಸುಳ್ಯದ ಖ್ಯಾತ ಇಎನ್‌ಟಿ ವೈದ್ಯ ಡಾ.ರವಿಶಂಕರ್‌ರ ಪುತ್ರಿ ಅಭಿಜ್ಞಾ ಭಟ್ ಅಸೌಖ್ಯದಿಂದ ಜೂ.10 ರಂದು ನಿಧನರಾಗಿದ್ದಾರೆ.
ಅವರಿಗೆ 19 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅಭಿಜ್ಞಾ ಭಟ್ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಾಲೂಕಿಗೆ ಫಸ್ಟ್, ರಾಜ್ಯಕ್ಕೆ 4ನೇ ರ‍್ಯಾಂಕ್
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಭಿಜ್ಞಾ ಭಟ್ ಎಸ್ ಸುಳ್ಯ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದರು. ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗ (ಪಿಸಿಎಂಬಿ )ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಭಟ್ ಫಲಿತಾಂಶ ಪ್ರಕಟವಾದಾಗ 595 ಅಂಕ ಗಳಿಸಿದ್ದರು. ಹಿಂದಿಯಲ್ಲಿ 98 ಅಂಕ ಗಳಿಸಿದ್ದರು. ಬಳಿಕ ಹಿಂದಿ ವಿಷಯದ ಮರು ಮೌಲ್ಯ ಮಾಪನದಲ್ಲಿ ಒಂದು ಅಂಕ ಲಭಿಸಿ 99 ಅಂಕಗಳೊಂದಿಗೆ ಒಟ್ಟು 596 ಅಂಕ ಗಳಿಸಿದ್ದರು. ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದರು. ಹಾಗೆಯೇ ಜೆಇಇ ಮೈನ್ಸ್ನಲ್ಲಿ ಶೇ.94.29 ಗಳಿಸಿದ್ದರು.
ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣದಿಂದ ಅಭಿಜ್ಞಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಂದೆ ಡಾ.ರವಿಶಂಕರ್, ತಾಯಿ ಅನುಪಮಾ, ಸಹೋದರಿ ಅನುಜ್ಞಾರನ್ನು ಅಭಿಜ್ಞಾ ಅಗಲಿದ್ದಾರೆ.






