ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಜೆಸಿಬಿ ಯಂತ್ರ ದುರಸ್ತಿ ವೇಳೆ ಕಾರು ಡಿಕ್ಕಿ: ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿ ದಾರುಣ ಸಾವು
Views: 49
ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿ ಜಿಲ್ಲೆಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ಎದೆನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಜೆಸಿಬಿ ಯಂತ್ರವನ್ನು ದುರಸ್ತಿ ಮಾಡುತ್ತಿದ್ದ ವ್ಯಕ್ತಿಗೆ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿಯ ರುಂಡವು ದೇಹದಿಂದ ಬೇರ್ಪಟ್ಟು ಕಾರಿನ ಇಂಜಿನ್ ಒಳಗೆ ಸಿಲುಕಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಎಂದು ಗುರುತಿಸಲಾಗಿದೆ.
ತಾಂತ್ರಿಕ ದೋಷದಿಂದಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಜೆಸಿಬಿ ಯಂತ್ರವನ್ನು ಸರಿಪಡಿಸಲು ಸದಾನಂದ ಅವರು ಕೆಳಕ್ಕೆ ಬಾಗಿದ್ದರು. ಈ ಸಮಯದಲ್ಲಿ ಕುಂದಗೋಳ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಸದಾನಂದ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಡಿಕ್ಕಿಯ ರಭಸಕ್ಕೆ ಸದಾನಂದ ಅವರ ರುಂಡವು ಕತ್ತರಿಸಿ ದೇಹದಿಂದ ಬೇರ್ಪಟ್ಟಿದೆ. ಕತ್ತರಿಸಲ್ಪಟ್ಟ ರುಂಡವು ಕಾರಿನ ಮುಂಭಾಗದ ಬಾನೆಟ್ ಸೀಳಿಕೊಂಡು ನೇರವಾಗಿ ಇಂಜಿನ್ ಒಳಗೆ ಹೋಗಿ ಸಿಲುಕಿಕೊಂಡಿದೆ. ಅಪಘಾತದ ನಂತರ ಕಾರು ನಿಂತಾಗ ಈ ಭಯಾನಕ ದೃಶ್ಯವನ್ನು ಕಂಡ ಸ್ಥಳೀಯರು ಹೌಹಾರಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನ್‌ನಲ್ಲಿ ಸಿಲುಕಿದ್ದ ರುಂಡವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾರು ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






