ಖಾಸಗಿ ಜಾಗದಲ್ಲಿ 12 ವರ್ಷಗಳಿಂದ ಶಾಲೆ-ಕಾಲೇಜು ನಡೆದರೆ ಆ ಜಾಗ ಇನ್ಮುಂದೆ ಸರ್ಕಾರದ ವಶ
Views: 48
ಕನ್ನಡ ಕರಾವಳಿ ಸುದ್ದಿ: ರಾಜ್ಯದ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವ ಭೂಮಿಯನ್ನು ಸಂರಕ್ಷಿಸಲು ಕರ್ನಾಟಕ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮ) ವಿಧೇಯಕ 2026’ ಅನ್ನು ಮಂಡಿಸಲಾಯಿತು.
ಯಾವುದೇ ಖಾಸಗಿ ಜಾಗದಲ್ಲಿ ಕನಿಷ್ಠ 12 ವರ್ಷಗಳಿಂದ ಸತತವಾಗಿ ಸರ್ಕಾರಿ ಶಾಲೆ ಅಥವಾ ಕಾಲೇಜು ನಡೆಯುತ್ತಿದ್ದರೆ, ಆ ಭೂಮಿ ಇನ್ನು ಮುಂದೆ ಅಧಿಕೃತವಾಗಿ ಸರ್ಕಾರದ ಸ್ವತ್ತಾಗಲಿದೆ. ಈ ಭೂಮಿಯ ಮೇಲೆ ಈ ಹಿಂದೆ ಯಾವುದೇ ಸಾಲ (ಋಣಭಾರ), ಹಕ್ಕು ಪ್ರತಿಪಾದನೆ ಅಥವಾ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿವಾದಗಳಿದ್ದರೂ, ಅವೆಲ್ಲವೂ ಇನ್ನು ಮುಂದೆ ಮಾನ್ಯವಾಗುವುದಿಲ್ಲ. ಅವುಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ ಸರ್ಕಾರದ ಹೆಸರಿಗೆ ನೋಂದಾಯಿಸಲಾಗುತ್ತದೆ.
ಈ ವಿಧೇಯಕದ ಅನ್ವಯ, ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶವಿಲ್ಲದಂತೆ ನಿರ್ಬಂಧ ವಿಧಿಸಲಾಗಿದೆ.
ರಾಜ್ಯದ ಒಟ್ಟು 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಸುಮಾರು 13,000 ಶಾಲೆಗಳ ಆಸ್ತಿ ಕೈತಪ್ಪುವ ಭೀತಿಯಲ್ಲಿದೆ. ಹಲವು ದಶಕಗಳ ಹಿಂದೆ ದಾನಿಗಳು ಶಾಲೆಗಳಿಗೆ ಭೂಮಿ ನೀಡಿದ್ದರೂ, ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ಅವು ಮೂಲ ಕುಟುಂಬಗಳ ಹೆಸರಿನಲ್ಲೇ ಉಳಿದಿವೆ. ಈಗ ಅವರ ವಾರಸುದಾರರು ಆ ಜಾಗ ತಮ್ಮದು ಎಂದು ಹಕ್ಕು ಮಂಡಿಸಿ ನ್ಯಾಯಾಲಯದಲ್ಲಿ ದಾವೆ ಹೂಡುತ್ತಿದ್ದಾರೆ. ಇದರಿಂದ ಸಾವಿರಾರು ಶಾಲೆಗಳು ಮುಚ್ಚುವ ಆತಂಕ ಎದುರಾಗಿತ್ತು. ಇದನ್ನು ತಡೆಗಟ್ಟಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಧೇಯಕವನ್ನು ಮಂಡಿಸಿದ್ದಾರೆ.






