ಮೋದಿ ರ್ಯಾಲಿಗಾಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ 6 ಪೊಲೀಸರು ಅಪಘಾತದಲ್ಲಿ ದಾರುಣ ಸಾವು
ರಾಜಸ್ಥಾನದಲ್ಲಿ ನರೇಂದ್ರ ಮೋದಿ ಅವರ ರ್ಯಾಲಿ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರು ಕರ್ತವ್ಯಕ್ಕೆ ತೆರಳುವಾಗ ಕಾರು ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Views: 0
ಜೈಪುರ: ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಾಗಿ ನಿಯೋಜನೆಗೊಂಡಿದ್ದ ಆರು ಪೊಲೀಸರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚುರು ಜಿಲ್ಲೆಯ ಕನೋಟ ಪೊಲೀಸ್ ಪೋಸ್ಟ್ ಪ್ರದೇಶದಲ್ಲಿ ಟ್ರಕ್ಗೆ ಪೊಲೀಸರು ಇದ್ದ ಎಸ್ಯುವಿ ವಾಹನವು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಆರು ಪೊಲೀಸರು ಮೃತಪಟ್ಟರೆ, ಒಬ್ಬ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗೌರ್ ಜಿಲ್ಲೆಯ ಝುಂಝುನುದಲ್ಲಿ ಭಾನುವಾರ (ನವೆಂಬರ್ 19) ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಆಯೋಜನೆಗೊಂಡಿತ್ತು. ಇದಕ್ಕಾಗಿ ಪೊಲೀಸರನ್ನು ವಿಐಪಿ ಡ್ಯೂಟಿಗೆ ನಿಯೋಜಿಸಲಾಗಿತ್ತು. ಪೊಲೀಸರು ಭಾನುವಾರ ಬೆಳಗಿನ ಜಾವ ಮಹೀಂದ್ರಾ ಜೈಲೋ ಕಾರಿನಲ್ಲಿ ನಾಗೌರ್ನಿಂದ ಝುಂಝುನುಗೆ ತೆರಳುತ್ತಿದ್ದರು. ಇನ್ನೂ ಮಂಜು ಮುಸುಕಿದ ವಾತಾವರಣ ಇದ್ದ ಕಾರಣ ಪೊಲೀಸರು ಇದ್ದ ಕಾರು ಟ್ರಕ್ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡಿರುವ ಮತ್ತೊಬ್ಬ ಪೊಲೀಸ್ ಅಧಿಕಾರಿ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತ ಸಂಭವಿಸುತ್ತಲೇ ಐವರು ಪೊಲೀಸರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತ ಪೊಲೀಸರನ್ನು ರಾಮಚಂದ್ರ (56), ಸುಖರಾಮ್ (38), ಕುಂಭಾರಮ್ (35), ಧನರಾಮ್ (33), ಸುರೇಶ್ (35) ಹಾಗೂ ಮಹೇಂದ್ರ (51) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಪೊಲೀಸ್ ಅಧಿಕಾರಿಯನ್ನು ಸುಖರಾಮ್ ಖೋಜಾ ಎಂಬುವರು ಗಾಯಗೊಂಡಿದ್ದಾರೆ. ಇವರು ನಾಗೌರ್ ಜಿಲ್ಲೆಯ ಖಿನ್ವಸಾರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.







