ಮದುವೆ ಆಮಂತ್ರಣ ನೀಡಲೆಂದು ಹೋದವರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು:ಮೂವರ ಸಾವು

Views: 100
ಕನ್ನಡ ಕರಾವಳಿ ಸುದ್ದಿ: ಮದುವೆ ಆಮಂತ್ರಣ ನೀಡಲು ಹೋಗುತ್ತಿದ್ದವರ ಕಾರು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಸಮೀಪ ಸಂಭವಿಸಿದೆ.
ಮೃತರನ್ನು ಕಾರು ಚಾಲಕ ಮಹೇಶ್ (32), ಪ್ರೇಮ್‌ಕುಮಾರ್ (25) ಹಾಗೂ ಅನ್ನದಾನಯ್ಯ (25) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ನಿತ್ಯಾನಂದ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕಲಬುರಗಿಯ ಜಿಮ್ಸೌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ಸೇಡಂ ಕಲಬುರಗಿ ಹೆದ್ದಾರಿಯಲ್ಲಿ ರಾತ್ರಿ 9.30ರ ಸಮಯದಲ್ಲಿ ತೆರಳುತ್ತಿದ್ದಾಗ ಎದುರೆಗಡೆಯಿಂದ ಬಂದ ವಾಹನದ ಲೈಟ್ ಚಾಲಕನ ಕಣ್ಣಿಗೆ ಬಡಿದು ಮುಂದೆ ದಾರಿ ಕಾಣದೇ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ಮಳಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.