ಮಣಿಪಾಲ: ಹಣಕ್ಕಾಗಿ ಯುವತಿಗೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿದ ಪ್ರಕರಣ: ಸ್ನೇಹಿತೆಯ ಬಂಧನ
Views: 55
ಕನ್ನಡ ಕರಾವಳಿ ಸುದ್ದಿ: ಮಣಿಪಾಲದ ಶಾಂತಿನಗರ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಗೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣವನ್ನು ಮಣಿಪಾಲ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸ್ನೇಹಿತೆಯನ್ನೇ ಬಂಧಿಸಿದ್ದಾರೆ.
ಅಂಕೋಲ ತಾಲೂಕಿನ ಖೇಣಿ ಬಾವಿಕೇರಿ ನಿವಾಸಿ ಸುಷ್ಮಾ ಅಣ್ಣಪ್ಪ ನಾಯ್ಕ್(31) ಬಂಧಿತ ಆರೋಪಿಯಾಗಿದ್ದಾಳೆ. ಗಾಯಗೊಂಡ ಯುವತಿ ಯೋಗೀತಾ(23) ಕೂಡ ಅಂಕೋಲ ಮೂಲದವಳಾಗಿದ್ದು, ಸ್ನೇಹಿತೆಯರೊಂದಿಗೆ ಮಣಿಪಾಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಏನಿದು ಘಟನೆ
ವಿಚಾರಣೆ ವೇಳೆ ಆರೋಪಿ ಸುಷ್ಮಾಗೆ ತೀವ್ರ ಹಣಕಾಸಿನ ತೊಂದರೆ ಇದ್ದು, ಮನೆಯವರು ಹಣಕ್ಕಾಗಿ ಪೀಡಿಸುತ್ತಿದ್ದರು. ತಾನು ದುಡಿಯುವ ಹಣ ಸ್ವಂತ ಖರ್ಚಿಗೆ ಮಾತ್ರ ಸಾಕಾಗುತ್ತಿದ್ದರಿಂದ ಕಳೆದ 3 ವರ್ಷಗಳಿಂದ ಊರಿಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಮನೆಯವರು ಕೆಲಸ ಬಿಟ್ಟು ಊರಿಗೆ ಬರುವಂತೆ ಒತ್ತಾಯಿಸಿದ್ದರು. ಹೇಗಾದರೂ ಮಾಡಿ ಹಣ ಹೊಂದಿಸುವ ಉದ್ದೇಶದಿಂದ ಮೇ 12 ರ ರಾತ್ರಿ ಯೋಗಿತಾಳ ರೂಮ್‌ಗೆ ಹೋಗಿ ಆಕೆಯ ಜೊತೆ ಮಲಗಿದ್ದಾಳೆ. ಬಳಿಕ ಬೆಳಗ್ಗಿನ ಜಾವ 4.30 ಕ್ಕೆ ಯೋಗಿತಾ ನಿದ್ದೆಯಲ್ಲಿದ್ದಾಗ ಸುಷ್ಮಾ ಮುಂಚಿತವಾಗಿಯೇ ತಂದಿಟ್ಟುಕೊಂಡಿದ್ದ ಕಾಂಕ್ರೀಟ್ ಹಾಲೋ ಬ್ಲಾಕ್ ಕಲ್ಲನ್ನು ಯೋಗಿತಾ ತಲೆಗೆ ಹಾಕಿ ಕೊಲೆಗೆ ಯತ್ನಿಸಿ, ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆ ದೋಚಿದ್ದಾಳೆ. ಕೃತ್ಯದ ಬಳಿಕ ಏನೂ ತಿಳಿಯದವಳಂತೆ ಯೋಗಿತಾಳ ಸ್ನೇಹಿತೆಯರ ಜೊತೆ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದಾಳೆ.
ಪ್ರಕರಣದ ತನಿಖೆಗೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಿಸಿಟಿವಿ ಪರಿಶೀಲನೆ ಹಾಗೂ ಸಂಶಯಿತರ ವಿಚಾರಣೆ ವೇಳೆ ಸುಷ್ಮಾಳ ಮೇಲೆ ಅನುಮಾನ ಮೂಡಿದ್ದು, ತೀವ್ರ ವಿಚಾರಣೆ ನಡೆಸಿದಾಗ ಆರೋಪಿತೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತೆಗೆ ಹಣಕಾಸಿನ ತೊಂದರೆ ಹೆಚ್ಚಾಗಿದ್ದು, ಮನೆಯವರ ಒತ್ತಡದಿಂದ ಹಣದ ಅವಶ್ಯಕತೆ ಎದುರಾಗಿತ್ತು. ಈ ಕಾರಣದಿಂದಲೇ ಸ್ನೇಹಿತೆಯ ಚಿನ್ನಾಭರಣ ಕಳವು ಮಾಡಲು ಯೋಜನೆ ರೂಪಿಸಿದ್ದಳು ಎನ್ನಲಾಗಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವುಗೊಂಡ ಚಿನ್ನದ ಸರ ಮತ್ತು ಬೆಂಡೋಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖಾ ತಂಡದಲ್ಲಿ ಪಿಎಸ್‌ಐ ತಿಮ್ಮೇಶ್ ಬಿ.ಎನ್., ಶಂಭುಲಿಂಗಯ್ಯ ಸೇರಿದಂತೆ ಮಣಿಪಾಲ ಠಾಣೆ ಸಿಬ್ಬಂದಿ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಭಾಗವಹಿಸಿದ್ದರು.






