ಬೆಳ್ತಂಗಡಿ ಶಾಸಕ ಬಂಧನಕ್ಕೆ ಹೈಡ್ರಾಮಾ, ಹರೀಶ್ ಪೂಂಜಾ ಪೊಲೀಸ್ ಠಾಣೆಗೆ ಹಾಜರಾಗಿ ಜಾಮೀನಿನಲ್ಲಿ ಬಿಡುಗಡೆ

Views: 82
ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ಆವಾಜ್ ಹಾಕಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹರೀಶ್ ಪೂಂಜ ಬಂಧನಕ್ಕೆ ಪೊಲೀಸರು ಮುಂದಾಗಿದ್ದು ಈ ವೇಳೆ ಶಾಸಕ ಹರೀಶ್ ಪೂಂಜಾ ನಿವಾಸದ ಮುಂದೆ ಹೈಡ್ರಾಮವೇ ನಡೆದುಹೋಗಿದೆ. ಪೊಲೀಸ್ ಠಾಣೆಯಲ್ಲೇ ಪೊಲೀಸ್ ಸಿಬ್ಬಂದಿಗೆ ಆವಾಜ್ ಹಾಕಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 58/2024, ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.

ಪೊಲೀಸರು ಶಾಸಕ ಹರೀಶ್ ಪೂಂಜಾ ಮನೆಗೆ ಆಗಮಿಸಿ ಅವರ ಬಂಧನಕ್ಕೆ ಮುಂದಾಗಿದ್ದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ತೀವೃವಾಗಿ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಇದು ಕಾಂಗ್ರೆಸ್ ಸರ್ಕಾರದ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೋರ್ಚಾದ ಅಧ್ಯಕ್ಷನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದನ್ನು ಕೇಳಲು ಶಾಸಕರು ಹೋಗಿದ್ದಾರೆ. ಅವರ ಬಿಡುಗಡೆಗೆ ಪ್ರತಿಭಟನೆ ಮಾಡಿದ್ದಾರೆ. ಇದನ್ನು ನೀತಿ ಸಂಹಿತೆಯ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದೊಡ್ಡ ವಿಚಾರ ಮಾಡಿದ್ದಾರೆ. ನಮ್ಮ ಶಾಸಕನನ್ನು ಬಂಧಿಸಿದರೆ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾದ ವಿಚಾರದ ಸುದ್ದಿ ತಿಳಿದು ಪೂಂಜಾ ಪರ ವಕೀಲರು ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ಶಾಸಕರ ಬಂಧನಕ್ಕೆ ಅವಕಾಶ ನೀಡದಂತೆ ಕಾರ್ಯಕರ್ತರು ತಮ್ಮ ವಾಹನಗಳನ್ನು ದಾರಿಗೆ ಅಡ್ಡವಾಗಿಟ್ಟಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವಕೀಲರು ಪೊಲೀಸರು ನಿಯಮ ಬಾಹಿರವಾಗಿ ಶಾಸಕರನ್ನು ಬಂಧಿಸಲು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸು ಕೂಡ ನೀಡದೆ ನೇರವಾಗಿ ಮನೆಗೆ ಬಂದಿದ್ದಾರೆ. ಇದು ತಪ್ಪು ಎಂದು ಹೇಳಿದ್ದಾರೆ. ಡಿಎಸ್‌ಪಿಯವರು ನಿಮ್ಮನ್ನು ಬಂಧಿಸಲು ಬಂದಿದ್ದಲ್ಲ ವಿಚಾರಣೆಗೆ ಬನ್ನಿ ಎಂದು ಕರೆಯಲು ಬಂದಿದ್ದು ಎಂದಿದ್ದಾರೆ. ಆದರೆ ಈ ರೀತಿಯಾಗಿ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.






