ಬಿವೈ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

Views: 0
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುದ್ಧಿ ಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಬಳಗದ ವಿರುದ್ಧ ವಾಗ್ದಾಳಿ ನಡೆಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ, “ನಾನು ವಾಜಪೇಯಿ ನಾವುಸರ್ಕಾರದಲ್ಲಿ ಮಂತ್ರಿಯಾಗಿದ್ದವ. ಇವರೆಲ್ಲ ಬರುವ ಮುಂಚೆ ನಾನು ಕೇಂದ್ರ ಸಚಿವನಾಗಿದ್ದೆ. ಆದರೆ, ಈಗ ನನ್ನನ್ನು ಸರಿಯಾಗಿ ಪರಿಗಣಿಸುತ್ತಿಲ್ಲ” ಎಂಬ ದಾಟಿಯಲ್ಲಿ ಆಗಾಗ ಅಸಮಾಧಾನ ಹೊರ ಹಾಕುತ್ತಿದ್ದರು.
“ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರೆ. ಮುಖ್ಯಮಂತ್ರಿ ಬದಲಾಗುತ್ತಾರೆ” ಎಂದು ಯತ್ನಾಳ್ ಆಗಾಗ ಹೇಳುತ್ತಿದ್ದರು. ಅದರಂತೆ, ಅವಧಿಗೂ ಮುನ್ನವೇ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಿತು. ಬಳಿಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಬದಿಗಿರುಸುತ್ತಾ ಹೋಯಿತು. ಆದರೆ, ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಯಡಿಯೂರಪ್ಪ ಇಲ್ಲದೆ ಏನೂ ನಡೆಯದು ಎಂದು ಅರಿತು ಅವರ ಮಗನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಈ ಮೂಲಕ ಲೋಕಸಭೆ ಚುನಾವಣೆ ಗೆಲ್ಲುವ ಪ್ಲಾನ್ ಮಾಡಿದೆ.
ಈ ಬೆಳವಣಿಗೆಯಿಂದ ಯತ್ನಾಳ್ ನಿಗಿ ನಿಗಿ ಕೆಂಡದಂತಾಗಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಬೆನ್ನಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿ ಓಡಾಡಿ ಅಸಮಾಧಾನಿತ ನಾಯಕರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದರು. ಅವರು ಯತ್ನಾಳ್ ಮನೆಗೂ ಹೋಗುವವರಿದ್ದರು. ಆದರೆ, ‘ಯತ್ನಾಳ್ ನನ್ನ ಮನೆಗೆ ಬರಬೇಡ’ ಎಂದು ನೇರವಾಗಿ ಹೇಳಿದ್ದರು.






