ರಾಜಕೀಯ

ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸುದ್ದಿ: ಪ್ರಮೋದ್‌ ಮಧ್ವರಾಜ್ ಹೇಳಿದ್ದೇನು?

Views: 194

ಕನ್ನಡ ಕರಾವಳಿ ಸುದ್ದಿ:ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.

ನಾನು ಬಿಜೆಪಿಯನ್ನು ಅಧಿಕಾರಕ್ಕಾಗಿ ಸೇರಿಲ್ಲ, ಜನಸೇವೆಯ ಉದ್ದೇಶದಿಂದ ಸೇರಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ಆದರೆ ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾನು ಯಾವುದೇ ಅಧಿಕಾರ ಅಥವಾ ಹುದ್ದೆಗಾಗಿ ಪರಿತಪಿಸುತ್ತಿಲ್ಲ. ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿಸುವುದಿಲ್ಲ; ಜನರ ವಿಶ್ವಾಸ ಮತ್ತು ಸೇವೆಯೇ ವ್ಯಕ್ತಿಯ ನಿಜವಾದ ಶಕ್ತಿಯಾಗಿದೆ ಎಂಬ ನಂಬಿಕೆ ನನ್ನದು. ನನಗೆ ಅಧಿಕಾರ ಸಿಕ್ಕರೆ ಅದು ಕೇವಲ ಜನರ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮಾತ್ರ. ಅಧಿಕಾರ ಎನ್ನುವುದು ನನ್ನ ಪಾಲಿಗೆ ಗೌರವ ಅಥವಾ ಸ್ಥಾನಮಾನವಲ್ಲ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ನನ್ನ ರಾಜಕೀಯ ಪಯಣದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಅವರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!