ರಾಜಕೀಯ

ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ

ಬಿವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ

Views: 1

ನವದೆಹಲಿ, ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿವೈ ವಿಜಯೇಂದ್ರ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ರಾಜ್ಯಾಧ್ಯಕ್ಷ ಆಯ್ಕೆ ಚರ್ಚೆಗೆ ತೆರೆ ಬಿದ್ದಂತಾಗಿದೆ. ವಿಜಯೇಂದ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮುಂಚುಣಿಯಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಇದೀಗ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ

ವಿಜಯೇಂದ್ರಗೆ ಶುಭಾಶಯ ಕೋರಿದ ರಾಘವೇಂದ್ರ

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಶುಭ ಕೋರಿದ್ದಾರೆ.

ರಾಜ್ಯಾಧ್ಯಕ್ಷ ನೇಮಕ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಹಿರಿಯರ ಆಶೀರ್ವಾದ ಹಾಗೂ ಕಿರಿಯರ ಬೆಂಬಲದೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮುನ್ನಡೆಸುತ್ತಾರೆ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ದಿ. ಅನಂತಕುಮಾರ್ ಅವರೇ ಮುಂತಾದ ನಾಯಕರುಗಳ ದಾರಿಯಲ್ಲಿ ನಡೆಯುತ್ತಾರೆ ಅನ್ನುವ ಭರವಸೆ ನನಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಹೊಸ ಚೈತನ್ಯದೊಂದಿಗೆ ಬೆಳೆಯಲಿ, ರಾಜ್ಯವನ್ನು ಆವರಿಸಿಕೊಂಡಿರುವ ಕಾಂಗ್ರೆಸ್ ದುರಾಡಳಿತದ ಕಾರ್ಮೋಡದ ನಡುವೆ ಭರವಸೆಯ ಒಂದು ಹೊಸ ಕಿರಣವಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

Related Articles

Back to top button
error: Content is protected !!