ಬಸ್ರೂರು ಶ್ರೀ ಶಾರದಾ ಕಾಲೇಜು: “ಆರುಣ್ಯಾ-2024” ಉದ್ಘಾಟನೆ
Views: 139
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು, ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಮ್ಯಾನೇಜ್ಮೆಂಟ್ ಸ್ಪರ್ಧೆ- “ಅರಣ್ಯಾ 2024” ಎನ್ನುವ ವಾಣಿಜ್ಯ, ಆಡಳಿತ, ಸಾಂಸ್ಕೃತಿಕ, ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳ ಮೇಲೆ ಒಂದು ದಿನದ ಕಾರ್ಯಕ್ರಮ ನ.22 ರಂದು ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಕೋಟೇಶ್ವರ ರಾಜಾರಾಮ್ ಪಾಲಿಮರ್ಸ್ ಪ್ರವರ್ತಕರಾದ ಸುರೇಶ್ ಕಾಮತ್ ಉದ್ಘಾಟಿಸಿದರು. ಅವರು ಮಾತನಾಡಿ, ಜೀವನದ ಮಾರ್ಗ ಸರಿ ಇದ್ದರೆ ಜೀವನದ ಗುರಿ ಸರಿಯಾಗುತ್ತದೆ. ಆ ನಿಟ್ಟಿನಲ್ಲಿ ಕಲಿಯುವಂತಹ ವಿಷಯದಲ್ಲಿ ಆಸಕ್ತಿ, ಪ್ರೀತಿ ಇದ್ದಾಗ ಜೀವನ ಸುಗಮವಾಗುತ್ತದೆ. ನಕರಾತ್ಮಕ ಚಿಂತನೆ ಬಿಟ್ಟು ಸಕರಾತ್ಮಕವಾಗಿ ಚಿಂತನೆ ಮಾಡಿದಾಗ ವಿದ್ಯಾರ್ಥಿ ಜೀವನದಲ್ಲಿ ಉಜ್ವಲ ಭವಿಷ್ಯ ಕಾಣಬಹುದಾಗಿದೆ. ವಿದ್ಯಾರ್ಥಿ ಜೀವನದ ದಿಶೆ ಕೊಡುವ ಹಂತದಲ್ಲಿ ನಿಮಗೆ ಯಾವುದು ಸಂತೋಷ ಕೊಡುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿ ಅಲ್ಲಿ ಕೊರಗು ಇರುವುದಿಲ್ಲ ಎಂದು ವಿದ್ಯಾರ್ಥಿಗೆ ತಿಳಿ ಹೇಳಿದರು.
ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್, ಬಾಂಡ್ಯ ಎಜುಕೇಶನ್ ಟ್ರಸ್ಟ್ ಜಂಟಿ ನಿರ್ದೇಶಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಶ್ರೀಮತಿ ಅನುಪಮಾ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಜೀವನದ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಪೂರಕವಾದ ಪ್ರಕ್ರಿಯೆಯಲ್ಲಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳ ನಡುವೆ ಸಮತೋಲನ ಸಾಧ್ಯವಾಗುತ್ತದೆ. ತಮ್ಮಲ್ಲಿರುವ ಪ್ರತಿಭೆಯನ್ನು ಸಾಕಾರಗೊಳಿಸಿ, ಆದರ್ಶ ವಿದ್ಯಾರ್ಥಿಯಾಗಿದ್ದುಕೊಂಡು ತಾನು ಕಲಿತ ವಿದ್ಯಾಸಂಸ್ಥೆಗೆ ಋಣ ತೀರಿಸಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಕೊಲ್ಲೂರು ಎಸ್ ಸಿಡಿಸಿ ಸಿ ಬ್ಯಾಂಕ್ ಅಧಿಕಾರಿ ನಾಗೇಶ್, ಸಿ ಎ ಶರಣ್ ಕುಮಾರ್ ಶೆಟ್ಟಿ, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ಪೈ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ಕಾರ್ಯಕ್ರಮದ ಸಮನ್ವಯಾಧಿಕಾರಿ ಡಾ.ರವಿಚಂದ್ರ, ಐಕ್ಯೂಎಸಿ ಸಂದೀಪ, ವಿದ್ಯಾರ್ಥಿ ಪ್ರತಿನಿಧಿ ಅವಿನಾಶ್, ವಿಘ್ನೆಶ್, ರಶ್ವತ್, ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಶೆಟ್ಟಿ, ಪ್ರೊ. ಪುರುಷೋತ್ತಮ ಬಲ್ಯಾಯ, ತಿಮ್ಮಪ್ಪ ಗುಲ್ವಾಡಿ, ಗಣೇಶ್ ಮಾವಿನಕಟ್ಟೆ, ಮೀನಾ ಕಾರಂತ್, ಅನುಷಾ, ಉಮೇಶ್ ಅನಿತಾ ನಿಖಿಲ್ ಬಸ್ರೂರು ಇದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ದಿನೇಶ್ ಕಾಮತ್, ಸಿಎ ಶರಣ್ ಕುಮಾರ್ ಶೆಟ್ಟಿ, ನಾಗೇಶ್ ಅವರನ್ನು ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ಶ್ರೀಮತಿ ಚಂದ್ರಾವತಿ ಶೆಟ್ಟಿ ಸ್ವಾಗತಿಸಿದರು. ಡಾ. ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಉಪನ್ಯಾಸಕ ಸಂದೀಪ್ ವಂದಿಸಿದರು.ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.