ಪ್ರೀತಿಸಿ ಮದುವೆಯಾದ ಗಂಡನ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿ ಆತ್ಮಹತ್ಯೆ
Views: 54
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾದ ಪತಿಯ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿಯೊಬ್ಬರು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಕಲಬುರಗಿ ತಾಲೂಕಿನ ಔರಾದ್ ಗ್ರಾಮದಲ್ಲಿ ನಡೆದಿದೆ.
ಶೃತಿ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 2 ವರ್ಷಗಳ ಹಿಂದೆ ಈಕೆ ಗೋಪಾಲ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ವಿವಾಹದ ಬಳಿಕ ಕುಡಿತ, ಜೂಜಾಟ ಹಾಗೂ ದುಶ್ಚಟಗಳಿಗೆ ದಾಸನಾಗಿದ್ದ. ಬುಧವಾರ ಗೋಪಾಲ್, ಮತ್ತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಅಲ್ಲದೆ ದುಶ್ಚಟಗಳಿಗಾಗಿ ಸುಮಾರು 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಸಾಲ ತೀರಿಸಲು ತಾವು ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಲು ಗೋಪಾಲ್ ಮುಂದಾಗಿದ್ದನು. ಆದರೆ ಪತ್ನಿ ಶೃತಿ ಸಹಿ ಹಾಕಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆತ, ಆಕೆಗೆ ಹಲ್ಲೆ ನಡೆಸಿ, ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕ್ರೌರ್ಯ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.ಇದರಿಂದ ತೀವ್ರ ಮನನೊಂದ ಶೃತಿ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಲಬುರಗಿ ಮಹಿಳಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.






