ಪ್ರೀತಿಸಿದ ಹುಡುಗಿ ಕೈಕೊಟ್ಟು ಇನ್ನೊಬ್ಬನ ಜೊತೆ ನಿಶ್ಚಿತಾರ್ಥ: ಬಾಡಿಬಿಲ್ಡರ್ ಆತ್ಮಹತ್ಯೆ
Views: 68
ಕನ್ನಡ ಕರಾವಳಿ ಸುದ್ದಿ: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ 26 ವರ್ಷದ ಬಾಡಿಬಿಲ್ಡರ್ ಒಬ್ಬರು ಪ್ರೀತಿಸಿದ ಹುಡುಗಿ ಕೈಕೊಟ್ಟು, ಇನ್ನೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಕೇಳಿದ ಬಳಿಕ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಣ್(26) ಆತ್ಮಹತ್ಯೆ ಮಾಡಿಕೊಂಡ ಯುವಕ. ವೃತ್ತಿಯಲ್ಲಿ ಬಾಡಿಬಿಲ್ಡರ್ ಮತ್ತು ಜಿಮ್ ತರಬೇತುದಾರನಾಗಿದ್ದನು. ಕಳೆದ ಮೂರು ವರ್ಷಗಳಿಂದ ಓರ್ವ ಯುವತಿಯೊಂದಿಗೆ ಪ್ರೀತಿಯಲ್ಲಿದ್ದನು ಎನ್ನಲಾಗಿದೆ.
ನಿನ್ನೆ ಕಿರಣ್ ತನ್ನ ಗೆಳತಿಯನ್ನು ಭೇಟಿಯಾಗಿದ್ದು, ಅವಳು ಇಬ್ಬರ ನಡುವಿನ ಸಂಬಂಧವನ್ನು ಕಡಿದುಕೊಂಡು ಇನ್ನೊಬ್ಬರ ಜೊತೆ ಮದುವೆಯಾಗುತ್ತಿರುವ ಮತ್ತು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿದ್ದಾಳೆ ಎನ್ನಲಾಗಿದೆ. ಇದರಿಂದ ಕಂಗಾಲಾದ ಕಿರಣ್ ಮನನೊಂದು ಮನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರೀತಿಸಿದ ಯುವತಿಗೆ ಲಕ್ಷಾಂತರ ರೂಪಾಯಿ ಹಣದ ಸಹಾಯವನ್ನು ಮಾಡಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಕಿರಣ್ ಬಾಗಿಲು ತೆಗೆಯದೇ ಹೊರಬರದಿದ್ದಾಗ, ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ನೋಡಿದಾಗ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿದೆ.
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿರುವ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ವೇಳೆ ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.






