ಪತಿ ಮೇಲೆ ಸಿಟ್ಟಿಗೆ ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ

Views: 126
ಕಾರವಾರ,ಪತಿಯ ಮೇಲಿನ ಸಿಟ್ಟಿಗೆ ಆರು ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ತಾಯಿಯೇ ಎಸೆದ ಅಮಾನವೀಯ ಘಟನೆ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ.
ಹಾಲಮಡ್ಡಿಯ ಸಾವಿತ್ರಿ ನಾಲೆಗೆ ಎಸೆದ ಪಾಪಿ ತಾಯಿಯಾಗಿದ್ದು, ವಿನೋದ್ (6) ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಮಗುವು ಮೂಕನಾಗಿದ್ದರಿಂದ ಸಾವಿತ್ರಿ ಹಾಗೂ ರವಿಕುಮಾರ್ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ರವಿಕುಮಾರ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಎಂದು ಸಾವಿತ್ರಿಗೆ ಬೈಯ್ಯುತ್ತಿದ್ದು,ನಿನ್ನೆ ರಾತ್ರಿಯೂ ಸಹ ಸಾವಿತ್ರಿ ಹಾಗೂ ಪತಿ ರವಿಕುಮಾರ್ ಜತೆಗೆ ಜಗಳ ನಡೆದಿದೆ.
ಪತಿ ಜತೆಗೆ ಗಲಾಟೆ ಆದಾಗ ಸಾವಿತ್ರಿ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಗುವನ್ನು ಹುಡುಕಾಡಲು ಮುಂದಾಗಿದ್ದಾರೆ.
ಆದರೆ ಮಗು ಸಿಗದಿದ್ದಾಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆ ವೇಳೆ ಮೃತದೇಹವು ಪತ್ತೆಯಾಗಿದೆ. ನಾಲೆಗೆ ಎಸೆಯಲ್ಪಟ್ಟಾಗ ಮೊಸಳೆಯೊಂದು ಮಗುವಿನ ಬಲಗೈ ಕಚ್ಚಿ ಎಳೆದು ಹೋಗಿತ್ತು.
ಆರು ವರ್ಷದ ಗಂಡು ಮಗುವಿಗಾಗಿ ನಿನ್ನೆ ರಾತ್ರಿಯಿಂದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು,ಇಂದು ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಆಗಾಗ ಮೊಸಳೆಯು ಕಾಣಿಸಿಕೊಂಡಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದೆ. ಮುಳುಗು ತಜ್ಞರು ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹ ಬಿಡಿಸಿಕೊಂಡು ಬಂದಿದ್ದಾರೆ.
ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ.






