ಪತಿ ಮರು ಮದುವೆ: ಮಕ್ಕಳ ಶವಗಳು ತಾಯಿಯೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Views: 65
ಕನ್ನಡ ಕರಾವಳಿ ಸುದ್ದಿ:ಪತಿ ಮರುಮದುವೆಯಾಗಿದ್ದಕ್ಕೆ ಮನನೊಂದ ಮಹಿಳೆ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
29 ವರ್ಷದ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀರ್ಘಕಾಲದ ಕೌಟುಂಬಿಕ ಕಲಹವೇ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ.
ಮೃತರನ್ನು ಎಸ್ ಬಾನೋತ್ ಶ್ರಾವಂತಿ (29) ಮತ್ತು ಅವರ ಪುತ್ರರಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶ್ರಾವಂತಿ ಸುಮಾರು 13 ವರ್ಷಗಳ ಹಿಂದೆ ಬೋಡಾ ಪ್ರವೀಣ್ ಅವರನ್ನು ವಿವಾಹವಾಗಿದ್ದರು ಮತ್ತು ಪ್ರವೀಣ್ ಬೇರೊಬ್ಬ ಮಹಿಳೆಯನ್ನು ಮದುವೆಯಾದ ನಂತರ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಪದೇ ಪದೇ ಜಗಳವಾಡುತ್ತಿದ್ದ ಕಾರಣ ಶ್ರಾವಂತಿ ಇತ್ತೀಚೆಗೆ ಮನೆ ಬಿಟ್ಟು ವಾರಂಗಲ್‌ನಲ್ಲಿರುವ ತವರು ಮನೆಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ಸೋಮವಾರ ರಾತ್ರಿ ಪ್ರವೀಣ್ ಜೊತೆ ಹೈದರಾಬಾದ್‌ಗೆ ಮರಳುವಂತೆ ಮನವೊಲಿಸಿದ್ದರು.
ಮಂಗಳವಾರ ಮಧ್ಯಾಹ್ನ, ಪ್ರವೀಣ್ ಮಧ್ಯಾಹ್ನ 1.30 ರ ಸುಮಾರಿಗೆ ಕೆಲಸದಿಂದ ಹಿಂತಿರುಗಿದಾಗ ಮುಖ್ಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು.ಪದೇ ಪದೇ ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದರು ಎಂದು ಬಾಲನಗರ ಎಸಿಪಿ ಪಿ. ನರೇಶ್ ರೆಡ್ಡಿ ಹೇಳಿದರು.
ಮಕ್ಕಳ ಶವಗಳು ಅವರ ತಾಯಿಯೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ,
ಪ್ರಾಥಮಿಕವಾಗಿ ಮಹಿಳೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನುವ ಅನುಮಾನವಿದೆ, ಇಬ್ಬರು ಮಕ್ಕಳ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ತಿಳಿಯಲಿದೆ ಎಂದು ಎಸಿಪಿ ನರೇಶ್ ರೆಡ್ಡಿ ಹೇಳಿದರು.






