ನಿವೃತ್ತ ಶಿಕ್ಷಕ, ಪತ್ರಕರ್ತ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ, ಎಸ್. ಜನಾರ್ದನ ಮರವಂತೆ ನಿಧನ
Views: 96
ಕನ್ನಡ ಕರಾವಳಿ ಸುದ್ದಿ: ನಿವೃತ್ತ ಶಿಕ್ಷಕ, ಪತ್ರಕರ್ತ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮರವಂತೆ (88) ಅವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 6 ಶನಿವಾರ ಬೆಳಿಗ್ಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ರಾಜ್ಯಶಾಸ್ತ್ರ ಮತ್ತು ಆಂಗ್ಲ ಸಾಹಿತ್ಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ, ಶಿಕ್ಷಣದಲ್ಲಿ ಸ್ನಾತಕ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಆಂಗ್ಲ ಮತ್ತು ವಿದೇಶೀ ಭಾಷೆಗಳ ಅಧ್ಯಯನ ಸಂಸ್ಥೆಯಿಂದ ಆಂಗ್ಲಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುವ ಜನಾರ್ದನರು ಖಂಬದಕೋಣೆ, ಕುಂದಾಪುರ, ಬೈಂದೂರು, ಶಂಕರನಾರಾಯಣದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಚಿಕ್ಕಮಗಳೂರಿನ ಸಖರಾಯಪಟ್ಟಣ ಮತ್ತು ನಾವುಂದದಲ್ಲಿ ಉಪನ್ಯಾಸಕರಾಗಿ ದುಡಿದು 1999ರಲ್ಲಿ ನಿವೃತ್ತರಾದರು. ನಂತರ ಅವರು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದಾರೆ.
ಮೂರು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುದೀರ್ಘ 25ಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತಜ್ಞರಾಗಿ ಸೇವೆ ಸಲ್ಲಿಸಿದ್ದರು. ಪಂಚಾಯತ್ ರಾಜ್ ವಿಷಯದಲ್ಲಿ ಅವರು ಅನೇಕ ಕೃತಿಗಳನ್ನು ರಚಿಸಿದ್ದು ಜನಾಧಿಕಾರ ಪುಸ್ತಕ ಇಡೀ ಪಂಚಾಯತ್ ರಾಜ್ ವ್ಯವಸ್ಥೆಗೆ ಕೈಪಿಡಿ ಆಗಿತ್ತು. ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಅವರು ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರ ಅಂತಿಮ ದರ್ಶನ ಜೂನ್ 7 ಆದಿತ್ಯವಾರ ಬೆಳಿಗ್ಗೆ 8 ಗಂಟೆಯಿಂದ ಮಧಾಹ್ನ3 ಗಂಟೆಯ ತನಕ ಮರವಂತೆಯ ಸಾಧನ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.






