ನಿಗೂಢವಾಗಿ ನಾಪತ್ತೆಯಾದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ!
Views: 84
ಕನ್ನಡ ಕರಾವಳಿ ಸುದ್ದಿ: ಪತ್ನಿ ಮತ್ತು ಪುಟ್ಟ ಮಗು ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನನೊಂದ ಪತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ನಡೆದಿದೆ.
ಮೂಲತಃ ಕೊಯಿಲ ನಿವಾಸಿಯಾದ ಮುನೀರ್ ಮತ್ತು ಮೂಡಿಗೆರೆ ಮೂಲದ ನೇಹಾ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮುನೀರ್ ತನ್ನ ಪತ್ನಿ ಮತ್ತು ಸಣ್ಣ ಮಗನೊಂದಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಹಿರಿಯ ಮಗಳನ್ನು ರಾಮಕುಂಜದಲ್ಲಿರುವ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು.
ಡಿಸೆಂಬರ್ 25 ರಂದು ಮುನೀರ್ ಬೆಂಗಳೂರಿನಿಂದ ಒಬ್ಬನೇ ರಾಮಕುಂಜಕ್ಕೆ ಬಂದಿದ್ದನು. ಪತ್ನಿ ಮತ್ತು ಮಗು ಎಲ್ಲಿ ಎಂದು ಮನೆಯವರು ವಿಚಾರಿಸಿದಾಗ, “ಅವರು ಇನ್ನೆರಡು ದಿನಗಳಲ್ಲಿ ಬರುತ್ತಾರೆ” ಎಂದು ನಂಬಿಸಿದ್ದನು. ಆದರೆ ದಿನಗಳು ಕಳೆದರೂ ಅವರು ಮರಳಲಿಲ್ಲ. ಈ ನಡುವೆ ಮುನೀರ್ ತನ್ನ ಪತ್ನಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದುದನ್ನು ಮನೆಯವರು ಗಮನಿಸಿದ್ದರು.
ಪತ್ನಿ ಮತ್ತು ಮಗುವಿನ ನಾಪತ್ತೆಯಿಂದ ತೀವ್ರ ಖಿನ್ನತೆಗೊಳಗಾದಂತೆ ಕಂಡುಬಂದ ಮುನೀರ್, ಡಿ.30 ರಂದು ಮರ ಹತ್ತಿ ಹಗ್ಗದ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದನು.
ಅಂದು ಸ್ಥಳೀಯರು ಆತನನ್ನು ರಕ್ಷಿಸಿದ್ದರು. ಆದರೆ, ಜೂನ್ 3 ರಂದು ರಾತ್ರಿ ರಾಮಕುಂಜದ ಆಯಿಷಾ ಶಾಲೆಯ ಬಳಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ತಕ್ಷಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುನೀರ್ ಪ್ರಸ್ತುತ ಮಾತನಾಡಲಾಗದ ಸ್ಥಿತಿಯಲ್ಲಿದ್ದು. ಪತ್ನಿ ನೇಹಾಳ ಫೋನ್ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಅವರು ವಾಸವಿದ್ದ ಸ್ಥಳ ಯಾವುದು? ಅವರು ನಿಜಕ್ಕೂ ನಾಪತ್ತೆಯಾಗಿದ್ದಾರೆಯೇ ಅಥವಾ ಬೇರೆನಾದರೂ ಸಂಭವಿಸಿದೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಮುನೀರ್ ಅವರ ಅಕ್ಕ ಹಾಜಿರಾಬಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 04/2026) ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.






