ಇತರೆ

ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರು ಮಕ್ಕಳನ್ನು ಕೊಂದ ಹೆತ್ತ ತಾಯಿ

Views: 159

ಬೆಂಗಳೂರು-ಹೆತ್ತ ತಾಯಿಯೇ ಮಲಗಿದ್ದ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಗರದ ಜಾಲಹಳ್ಳಿಯಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಗಂಗಾದೇವಿ ತನ್ನ ಇಬ್ಬರು ಮಕ್ಕಳಾದ ಲಕ್ಷ್ಮೀ (9), ಗೌತಮ್ (7) ಕೊಲೆ ಮಾಡಿದ್ದು,ಪಾಪಿ ತಾಯಿ ಕೊಲೆ ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾಳೆ.

ಮಕ್ಕಳಿಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿರುವ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ಗಂಗಾದೇವಿ ಕುಟುಂಬ ಜಾಲಹಳ್ಳಿಯಲ್ಲಿ ನೆಲೆಸಿತ್ತು. ಆರೋಪಿ ಗಂಗಾದೇವಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಬಿಬಿಎಂಪಿಯ ಗುತ್ತಿಗೆ ಆಧಾರದ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಕಳೆದ ಮಾರ್ಚ್ ತಿಂಗಳಿನಲ್ಲಿ ಪತಿಯ ವಿರುದ್ಧ ಗಂಗಾದೇವಿಯೇ ನೀಡಿದ್ದ ದೂರಿನ ಅನ್ವಯ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಬ್ಬರು ಮಕ್ಕಳೊಂದಿಗೆ ನಿನ್ನೆ ಯುಗಾದಿ ಹಬ್ಬ ಆಚರಿಸಿದ್ದ ಗಂಗಾದೇವಿ, ತಡರಾತ್ರಿ ಮಕ್ಕಳಿಬ್ಬರನ್ನೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ರಾತ್ರಿ 1 ಗಂಟೆ ಸುಮಾರಿಗೆ ತಾನೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಗಲಾಟೆಯಾಗಿದೆ ಎಂದು ಪೊಲೀಸರ ನೆರವು ಕೇಳಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರ ಎದುರು ತಾನೇ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಗಂಗಾದೇವಿ ಒಪ್ಪಿಕೊಂಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಕುಟುಂಬ ನಿರ್ವಹಣೆಗೆ ಕಷ್ಟ ಆಗುತ್ತಿದ್ದುದರಿಂದ ಮಾನಸಿಕ ಒತ್ತಡಕ್ಕೊಳಪಟ್ಟು ಆರೋಪಿಯೇ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ ಎಂದರು.

Related Articles

Back to top button
error: Content is protected !!