ತಾಯಿಯೊಂದಿಗೆ ಜಗಳವಾಡಿದ್ದ ವ್ಯಕ್ತಿಯಿಂದ ಮಗು ಬಲಿ
Views: 72
ಕನ್ನಡ ಕರಾವಳಿ ಸುದ್ದಿ: ಅಕ್ಕ-ಪಕ್ಕದ ಮನೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದ ಪಕ್ಕದ ಮನೆಯ ಕ್ರೂರಿಯೊಬ್ಬ6 ವರ್ಷದ ಮಗುವನ್ನು ಬಲಿ ಪಡೆದಿರುವ ಮನಕಲಕುವ ಘಟನೆ ವೈಟ್ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಸಂಭವಿಸಿದೆ.
ನೆರೆಹೊರೆಯವರ ನಡುವಿನ ದ್ವೇಷಕ್ಕೆ ಪಶ್ಚಿಮ ಬಂಗಾಳ ಮೂಲದ ಬಾಲಕಿ ಶಹಜಾನ್ ಕತೂನ್ (6) ಜೀವ ತೆತ್ತಿದ್ದಾಳೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಕುಟುಂಬವೊಂದು ನಲ್ಲೂರಳ್ಳಿಯಲ್ಲಿ ವಾಸವಾಗಿತ್ತು. ಈ ಕುಟುಂಬಕ್ಕೂ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು . ಇತ್ತೀಚೆಗೆ ನಡೆದ ಕಿತ್ತಾಟದ ನಂತರ, ಮಗುವಿನ ತಾಯಿಗೆ ’ಬುದ್ಧಿ ಕಲಿಸಬೇಕು’ ಎಂದು ಪಣತೊಟ್ಟ ಆರೋಪಿ, ಈ ಅಮಾಯಕ ಮಗುವನ್ನೇ ತನ್ನ ಸೇಡಿಗೆ ದಾಳವನ್ನಾಗಿ ಬಳಸಿಕೊಂಡಿದ್ದಾನೆ.
ಕೃತ್ಯ ಎಸಗಲು ಯೋಜಿಸಿದ ಆರೋಪಿ, ಬಾಲಕಿ ಶಹಜಾನ್ ಕತೂನ್ ಒಬ್ಬಳೇ ಇದ್ದ ಸಮಯ ನೋಡಿ ಹೊಂಚು ಹಾಕಿದ್ದನು. ಆಕೆಯನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿ ಮಗುವಿನ ಶವವನ್ನು ಬ್ಯಾಗ್ ಒಂದರಲ್ಲಿ ತುಂಬಿ, ಯಾರಿಗೂ ಅನುಮಾನ ಬರದಂತೆ ಸಮೀಪದ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ.
ಶವ ಚರಂಡಿಯಲ್ಲಿ ಪತ್ತೆ:ಮಗು ಕಾಣೆಯಾದ ಬಗ್ಗೆ ಪೋಷಕರು ಗಾಬರಿಗೊಂಡು ಹುಡುಕಾಡಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಕೂಡಲೇ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಮಗುವಿನ ತಾಯಿಯ ಜೊತೆ ಜಗಳವಾಡಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ತಾಯಿ ಯಾರ ಜೊತೆ ಜಗಳವಾಡಿದ್ದಾಳೆ ಎಂಬ ಅರಿವಿಲ್ಲದ ಹಸುಳೆಯನ್ನು ಇಷ್ಟು ಕ್ರೂರವಾಗಿ ಕೊಂದ ಆರೋಪಿಗಾಗಿ ವೈಟ್ಫೀಲ್ಡ್ ಪೊಲೀಸರು ಬಲೆ ಬೀಸಿದ್ದಾರೆ. ಸೇಡಿಗಾಗಿ ಹಸುಳೆಯ ಕೊಲೆ ಮಾಡಿರುವುದು ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ.
ಈ ಸಂಬಂಧ ವೈಟ್ಫೀಲ್ಡ್ ಡಿಸಿಪಿ ಸೈದುಲಾ ಅಡಾವತ್ ಅವರು ಮಾತನಾಡಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಪ್ಲಾಸ್ಟಿಕ್ ವೈರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.






