ರಾಜಕೀಯ

ಡಿಕೆಶಿ ಅವರನ್ನು ಕಟ್ಟಿ ಹಾಕಲು ಡಿಸಿಎಂ ಹುದ್ದೆ ಸೃಷ್ಟಿಸಲು ಸಿದ್ದರಾಮಯ್ಯ ಪಾತ್ರ: ವಿಜಯೇಂದ್ರ ಆರೋಪ

Views: 47

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಸೊಕ್ಕು ಮುರಿಯಬೇಕೆಂದೇ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ಸಿಎಂ ಸಿದ್ದರಾಮಯ್ಯನವರ ಪಾತ್ರವಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌‍ನಲ್ಲಿ ಒಂದು ಬಣ ಡಿ.ಕೆ.ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ವ್ಯವಸ್ಥಿತ ಷಡ್ಯಂತರ ರೂಪಿಸಿದೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬುದು ಸಿದ್ದರಾಮಯ್ಯ ಬಣದ ಸಚಿವರು ಹಾಗೂ ಶಾಸಕರ ಒತ್ತಾಸೆ ಎಂದರು.

ಶಿವಕುಮಾರ್‌ ವಿರುದ್ಧ ಆಡಳಿತ ಪಕ್ಷದಲ್ಲಿ ಸಾಕಷ್ಟು ರಾಜಕೀಯ ಪಿತೂರಿಗಳು ನಡೆಯುತ್ತಿವೆ. ಒಂದು ಬಣ ಅವರ ರಾಜಕೀಯ ಏಳಿಗೆಯನ್ನು ಸಹಿಸಿಕೊಳ್ಳುತ್ತಿದೆ. ಹೀಗಾಗಿ ಸಿದ್ದರಾಮಯ್ಯನವರು ಹೈಕಮಾಂಡ್‌ ಮೇಲೆ ಒತ್ತಡ ಹಾಕಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ರಾಜ್ಯದ ಜನರಿಗೆ ಬರೆ ಎಳೆಯುವ ಕೆಲಸ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಳೆದ ವಾರ ಸಿಎಂ ಪೆಟ್ರೋಲ್‌‍, ಡೀಸೆಲ್‌ ಬೆಲೆ ಏರಿಕೆ ಮಾಡಿದ್ದಾರೆ. ನಾವು ಪ್ರಶ್ನೆ ಮಾಡಿದರೆ ಉದ್ಧಟತನದ ಉತ್ತರ ಹೇಳುತ್ತಾರೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸಿಎಂ ಸಿದ್ದರಾಮಯ್ಯ ಯಾಕಿಷ್ಟು ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ನೋಡಿದರೆ ಅಯ್ಯೋ ಎನ್ನಿಸುತ್ತಿದೆ. ಆಡಳಿತ ಪಕ್ಷದ ಶಾಸಕರು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಅಭಿವೃದ್ಧಿಗೆ ಹಣ ಕೊಡಿ ಎಂದು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಕಾಂಗ್ರೆಸ್‌‍ ಸರಕಾರವು ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದರೂ ಸಹ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ಮತ್ತೊಂದೆಡೆ ಅಭಿವೃದ್ಧಿ ಶೂನ್ಯತೆ ರಾಜ್ಯವನ್ನು ಕಾಡುವಂತಾಗಿದೆ. ಅಭಿವೃದ್ಧಿ ಇಲ್ಲದೆ ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದು ವಿಶ್ಲೇಷಿಸಿದರು.

Related Articles

Back to top button
error: Content is protected !!