ಇತರೆ
ಜಾತಕ ತೋರಿಸಲು ಬಂದ ಯುವತಿಗೆ ಮದುವೆಯಾಗುವಂತೆ ಒತ್ತಾಯ:ಜ್ಯೋತಿಷಿ ಸೆರೆ
Views: 130
ಕನ್ನಡ ಕರಾವಳಿ ಸುದ್ದಿ: ಜಾತಕ ತೋರಿಸಲು ಬಂದ ಯುವತಿಯೊಬ್ಬಳ ಹಿಂದೆ ಬಿದ್ದ ಜ್ಯೋತಿಷಿಯೊಬ್ಬ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ.
ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಶೇಷಗಿರಿ ಭಟ್ ಆರೋಪಿ ಜ್ಯೋತಿಷಿ. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಈತನನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ತೆಕ್ಕಾರಿನ ಯುವತಿಯೊಬ್ಬಳ ಜಾತಕ ಪರಿಶೀಲಿಸಲು ಆಕೆಯ ಮನೆಯವರು ಶೇಷಗಿರಿ ಭಟ್ ಬಳಿಗೆ ಕರೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಯುವತಿಯ ಮನೆಯವರನ್ನು ಸಂಪರ್ಕಿಸಿದ ಶೇಷಗಿರಿ ಭಟ್, ಆಕೆಯ ದೋಷ ಪರಿಹಾರಕ್ಕಾಗಿ ಕೆಲವೊಂದು ಪೂಜೆ ಮಾಡಬೇಕಿದೆ ಎಂದು ಹೇಳಿದ್ದ. ಇದಾದ ಬಳಿಕ ಆತ ಯುವತಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಮನೆಯವರಲ್ಲಿ ಒತ್ತಾಯಿಸಿದ್ದ. ಆದರೆ ಮನೆಯವರು ಹಾಗೂ ಆ ಯುವತಿ ಇದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.






