ಚುನಾವಣೆ ಬಳಿಕ ಸಿಎಂ ಮತ್ತು ಡಿಸಿಎಂ ಅಧಿಕಾರ ಹಂಚಿಕೆ ಮುನ್ನಲೆಗೆ…! ಸಚಿವ ಸಂಪುಟ ಸರ್ಜರಿಯ ಚರ್ಚೆ ಜೋರು..!

Views: 46
ಬೆಂಗಳೂರು :ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಒಂದು ವರ್ಷ ಪೂರೈಸಿದ್ದು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರಿಂದ ಮಂತ್ರಿಗಿರಿಗಾಗಿ ಸಾಕಷ್ಟು ಒತ್ತಡಗಳು ಕೇಳಿ ಬರುತ್ತಿವೆ. ಕಳೆದ ವರ್ಷ ಮೇ 20 ರಂದು ಸಿದ್ದರಾಮಯ್ಯ ಅವರು ಸರ್ಕಾರ ರಚಿಸಿದಾಗ, ಅವರು ತಮ್ಮ ಸಚಿವ ಸಂಪುಟದ ಎಲ್ಲಾ 34 ಸ್ಥಾನಗಳನ್ನು ಒಂದೇ ಬಾರಿಗೆ ಸಚಿವರುಗಳನ್ನು ಆಯ್ಕೆ ಮಾಡಿಕೊಂಡಿದ್ದರು.
ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಕಾಂಗ್ರೆಸ್ ನಲ್ಲಿ ಚುನಾವಣೆ ಬಳಿಕ ಸೋಲು ಗೆಲುವಿನ ಲೆಕ್ಕಾಚಾರ ಒಂದು ಕಡೆಯಾದರೆ ಇತ್ತ ಸಚಿವ ಸಂಪುಟ ಸರ್ಜರಿಯ ಚರ್ಚೆ ಜೋರಾಗಿದೆ.
ಸಚಿವ ಸಂಪುಟ ರಚನೆಯಾದ ಸಂದರ್ಭದಲ್ಲಿ ಮಂತ್ರಿಗಿರಿ ಕೈ ತಪ್ಪಿದ ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಬಹಿರಂಗವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಕೆಲ ನಾಯಕರು ಸಚಿವ ಸಂಪುಟದಿಂದ ವಂಚಿತರಾದ ನಾಯಕರಿಗೆ ಭರವಸೆ ನೀಡಿದ್ದಾರೆ.ಇದೀಗ ಲೋಕಸಭೆ ಚುನಾವಣೆಯ ನಂತರ ಹೊಸ ಮುಖಗಳೊಂದಿಗೆ ಅವಕಾಶ ಕೊಡಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಮಾತುಗಳು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುನ್ನಲೆಗೆ ಬರುವ ಸಾಧ್ಯತೆ ಇದೆ. ಇತ್ತ ಸಚಿವ ಸಂಪುಟದಿಂದ ವಂಚಿತರಾದ ಸುಮಾರು ಹಲವು ಹಿರಿಯ ಕಾಂಗ್ರೆಸ್ಸಿಗರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಲೋಕಸಭೆ ಚುನಾವಣೆ ಮುಗಿದ ನಂತರ ಅವರು ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರೀಕ್ಷೆಯಿದೆ.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕ್ಷೇತ್ರಗಳನ್ನು ಗೆಲ್ಲದಿದ್ದರೇ ಅಥವಾ ಕಳಪೆ ಪ್ರದರ್ಶನ ನೀಡಿದರೆ ಕೆಲವು ಸಚಿವರನ್ನು ಕೈಬಿಡಬಹುದು ಎಂದು ಪಕ್ಷದ ವರಿಷ್ಠರು ಈ ಹಿಂದೆ ಸೂಚಿಸಿದ್ದರು. ಆರಂಭದಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಕೇಳಿದರೂ ನಿರಾಕರಿಸಿದ ಸಚಿವರ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಕೆಲ ಸಚಿವರಿಗೆ ಸಚಿವ ಸ್ಥಾನ ಕೈ ತಪ್ಪುವ ಆತಂಕ ಶುರುವಾಗಿದೆ.
ಹಿರಿಯ ಶಾಸಕರು ಶೀಘ್ರದಲ್ಲೇ ಸಭೆ ನಡೆಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಕೂಡ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.






