ಇತರೆ

ಚಾಲಕ ನಿಗೂಢ ಸಾವು ಪ್ರಕರಣ: ಓರ್ವ ಮಹಿಳೆ ಸೇರಿದಂತೆ  ಐವರು ಆರೋಪಿಗಳ ಬಂಧನ

Views: 152

ಕನ್ನಡ ಕರಾವಳಿ ಸುದ್ದಿ: ಗೋಣಿಕೊಪ್ಪಲಿನ ಹರಿಶ್ಚಂದ್ರಪುರ ನಿವಾಸಿ, ಚಾಲಕ ನವಾಜ್ ಎಂಬುವವರ ನಿಗೂಢ ಸಾವು ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಪೂರ್ಣಚಂದ್ರ ತೇಜಸ್ವಿ, ಆತನ ಪತ್ನಿ ಕಾವ್ಯಾ, ಅಶೋಕ್, ಕುಮಾ‌ರ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ.

ಕಳೆದ ಡಿಸೆಂಬರ್ 31ರ ರಾತ್ರಿ ಕುಂದಾ ಗ್ರಾಮಕ್ಕೆ ತನ್ನ ಕಾರಿನಲ್ಲಿ ತೆರಳಿದ್ದ ನವಾಜ್ ಅವರು ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಪೊಲೀಸರ ತೀವ್ರ ತನಿಖೆಯಲ್ಲಿ ಇದು ಪೂರ್ವನಿಯೋಜಿತ ಹಲ್ಲೆ ಮತ್ತು ಹತ್ಯೆ ಎಂಬ ಸತ್ಯಾಂಶ ಬಯಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ. ನಡುರಾತ್ರಿ ನವಾಜ್‌ ಅವರು ಆರೋಪಿ ಪೂರ್ಣಚಂದ್ರ ತೇಜಸ್ವಿಯ ಮನೆಗೆ ತೆರಳಿ ಆತನ ಪತ್ನಿ ಕಾವ್ಯಾಳ ಹೆಸರನ್ನು ಕೂಗಿ ಕರೆದಿದ್ದರು. ಇದರಿಂದ ಕೆರಳಿದ ಪೂರ್ಣಚಂದ್ರ. ತನ್ನ ಸ್ನೇಹಿತರಾದ ಅಶೋಕ್‌, ಕುಮಾ‌ರ್ ಮತ್ತು ಮಹೇಂದ್ರ ಅವರೊಂದಿಗೆ ಸೇರಿ ನವಾಜ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದನು. ಹಲ್ಲೆಯಿಂದ ನವಾಜ್ ಪ್ರಜ್ಞೆ ತಪ್ಪಿದಾಗ, ಪ್ರಕರಣವನ್ನು ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ ಆರೋಪಿಗಳು, ಆತನ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ನವಾಜ್‌ರನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದರು. ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾ‌ರ್ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಪೊಲೀಸರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದೆ.

Related Articles

Back to top button
error: Content is protected !!