ಇತರೆ

ಚಾಕು ತೋರಿಸಿ ಬೆದರಿಸಿ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾದ ಕಾರು ಪಲ್ಟಿ, ಓರ್ವ ದರೋಡೆಕೋರ ಸಾವು

Views: 153

ಕನ್ನಡ ಕರಾವಳಿ ಸುದ್ದಿ : ಚಾಕು ತೋರಿಸಿ ಕಾರ್ಮಿಕರ ಮೊಬೈಲ್‌ಗಳನ್ನು ಕಿತ್ತು ಪರಾರಿಯಾಗುತ್ತಿದ್ದ ವೇಳೆ ದರೋಡೆಕೋರರ ಕಾರು ಪಲ್ಟಿಯಾಗಿ ಓರ್ವ ಕಳ್ಳ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಬಳಿ ನಡೆದಿದೆ. ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನ ಸಿದ್ದು ಅಲಿಯಾಸ್ ಸಿದ್ದೇಶ್(25) ಮೃತಪಟ್ಟ ಕಳ್ಳ. ಕನ್ನಮಂಗಲದ ವೈಶಾಖ್ ಬಂಧಿತ. ಇವರಿಬ್ಬರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆಗಾಗ್ಗೆ ದರೋಡೆ ಕೃತ್ಯಗಳಲ್ಲೂ ತೊಡಗುತ್ತಿದ್ದರು ಎನ್ನಲಾಗಿದೆ. ಇನ್ನು ಘಟನೆಯ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಡ್ಲಘಟ್ಟ – ಎಚ್. ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯ ನಾಲ್ವರು ಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮ ಸ್ವಂತ ಊರು ಉತ್ತರ ಪ್ರದೇಶಕ್ಕೆ ತೆರಳಲು ಬಸ್‌ಗಾಗಿ ಎಚ್‌. ಕ್ರಾಸ್‌ಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ, ಕಾರ್ಮಿಕರ ಬಳಿಯಿದ್ದ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಇದೇ ವೇಳೆ ರಾತ್ರಿ ಗಸ್ತು ಮುಗಿಸಿ ಠಾಣೆಗೆ ಜೀಪಿನಲ್ಲಿ ವಾಪಾಸ್ ಆಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಎಸ್.ಐ ಅವರನ್ನು ಕಂಡ ಕೂಲಿ ಕಾರ್ಮಿಕರು, ಕಳ್ಳರು ತಮ್ಮ ಮೊಬೈಲ್ ಕದ್ದು ಪರಾರಿಯಾಗಿರುವ ವಿಚಾರ ತಿಳಿಸಿದ್ದಾರೆ. ಕಾರ್ಯಾಚರಣೆಗೆ ಮುಂದಾದ ಪೊಲೀಸರು, ದರೋಡೆಯಾದ ಮೊಬೈಲ್‌ಗಳ ಟವ‌ರ್ ಲೊಕೇಷನ್‌ ತಿಳಿದು ದರೋಡೆಕೋರರನ್ನು ಹಿಂಬಾಲಿಸಿದ್ದಾರೆ. ಅಷ್ಟರಲ್ಲಾಗಲೇ ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮಧ್ಯೆ ದರೋಡೆಕೋರರ ಕಾರು ರಸ್ತೆ ಪಕ್ಕ ಉರುಳಿಬಿದ್ದಿತ್ತು ಎನ್ನಲಾಗಿದೆ.

 

Related Articles

Back to top button
error: Content is protected !!