ಕೇಂದ್ರಿಯ ವಿವಿಯಲ್ಲಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತು ಕೊಟ್ಟ ಕ್ಯಾಂಟೀನ್ ಮಾಲೀಕ?

Views: 166
ಕನ್ನಡ ಕರಾವಳಿ ಸುದ್ದಿ: ದೇಶದ ಪ್ರಸಿದ್ದ ಕೇಂದ್ರಿಯ ವಿಶ್ವವಿದ್ಯಾಲಯವಾಗಿರುವ ಕಲಬುರಗಿಯ ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರಿಯ ವಿವಿಯು ದಿನೇದಿನೇ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದೆ. ಇತ್ತೀಚಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಮೇಲೆ ವಿಶ್ವವಿದ್ಯಾಲಯ ಕ್ಯಾಂಟೀನ್ ಮಾಲೀಕನಿಂದ ಲೈಂಗಿಕ ದೌರ್ಜನ್ಯ ಕೃತ್ಯ ನಡೆದಿದೆ ಎನ್ನುವ ಆರೋಪ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಇಮೇಲ್ ಮೂಲಕ ವಿವಿಯ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಎಂ.ಎ ಎಕಾನಾಮಿಕ್ಸ್ ವಿದ್ಯಾರ್ಥಿನಿ ಮೇಲೆ ಆಂಧ್ರಪ್ರದೇಶದ ಮೂಲದ ಆದಿಕೇಶವಲು ಎನ್ನುವ ಕ್ಯಾಂಟೀನ್ ಮಾಲೀಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮಗಳ ಸಮಾನ ಎನ್ನುತ್ತಲೇ ಕೆನ್ನೆಗೆ ಮುತ್ತಿಟ್ಟ ?
ವಿದ್ಯಾರ್ಥಿನಿ ಏಕೆ ಕಿಸ್ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಕ್ಯಾಂಟೀನ್ ಮಾಲೀಕ ಉತ್ತರಿಸದೆ, (ಐ ವಿಲ್ ಕಾಲ್ ಯು ಬೇಟಾ) ನಾನು ನಿನ್ನನ್ನು ಮಗಳ ಎಂದು ಕರೆಯುತ್ತೇನೆ ಎಂದು ಹೇಳಿ ಮುತ್ತಿಟ್ಟ ವಿಚಾರವನ್ನು ಮರೆಮಾಚಲು ಯತ್ನಿಸಿದ್ದಾನೆ. ಆದರೆ, ಆತ ನನ್ನನ್ನು ಒಳ್ಳೆಯ ರೀತಿಯಲ್ಲಿ ಮುಟ್ಟದೆ ಕೆಟ್ಟ ರೀತಿಯಲ್ಲಿ ಮುಟ್ಟಿದಂತೆ ಭಾಸವಾಗಿದೆ ವಿದ್ಯಾರ್ಥಿನಿ ಕ್ಯಾಂಟೀನ್ ಓನರ್ ವಿರುದ್ಧ ಆರೋಪಿಸಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗೆ ಕಳೆದ ಜುಲೈ 16ರಂದೇ ದೂರು ಸಲ್ಲಿಸಿದ್ದಾಳೆ.
ಕ್ಯಾಂಟೀನ್ ಗುತ್ತಿಗೆ ರದ್ದು
ಕಳೆದ ಏಪ್ರಿಲ್ 16ರಂದು ಲೈಂಗಿಕ ದೌರ್ಜನ್ಯ ಘಟನೆ ನಡೆದರು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ಇಮೇಲ್ ಮೂಲಕ ತಿಳಿಯುತ್ತಲ್ಲೇ ಎಚ್ಚೆತ್ತುಕೊಂಡ ಸಿಯುಕೆ ಆಡಳಿತ ಮಂಡಳಿ ಕೂಡಲೇ, ಆಂಧ್ರಪ್ರದೇಶದ ಆದಿಕೇಶವಲು ಅವರಿಗೆ ನೀಡಿದ ಕ್ಯಾಂಟೀನ್ ಗುತ್ತಿಗೆ ರದ್ದುಗೊಳಿಸಿ, ಕ್ಯಾಂಟೀನ್ ಮಾಲೀಕನನ್ನು ಕ್ಯಾಂಪಸ್ ನಿಂದ ಹೊರ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದಿನ ಪ್ರಕರಣವೇನು? ಪ್ರಾಣಿಶಾಸ್ತ್ರ ವಿಭಾಗದಲ್ಲಿ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಜಯಶ್ರೀ ಎಂಬ ವಿದ್ಯಾರ್ಥಿನಿ ಜುಲೈ 30ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿತ್ತು. ಈ ಕುರಿತು ಆಳಂದ ತಾಲೂಕಿನ ನರೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಲಿತ ಸಮುದಾಯದ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿರುವ ಜಯಶ್ರೀಗೆ ಅಲ್ಲಿ ಕ್ಯಾಂಟಿನ್ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಈಗ ಕೇಳಿ ಬರುತ್ತಿದೆ. ಆದರೆ ವಿದ್ಯಾರ್ಥಿನಿ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದು ಬರುತ್ತಿಲ್ಲ. ವಿದ್ಯಾರ್ಥಿನಿ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಕೂಗು ಒಕ್ಕೊರಲಿನಿಂದ ದಾಖಲಾಗುತ್ತಿದೆ.






