ಇತರೆ

ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ವ್ಯಕ್ತಿ ಸಾವು 

Views: 159

ಕನ್ನಡ ಕರಾವಳಿ ಸುದ್ದಿ: ಸಂಕ್ರಾಂತಿ ಹಬ್ಬಕ್ಕೆ ಮಗಳನ್ನು ಕರೆಯಲು ಬೈಕ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆ ಸೀಳಿದ್ದರಿಂದ ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಬೀದರ್ ನಲ್ಲಿ ಸಂಭವಿಸಿದೆ.

ಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ ಹೊಸಮನಿ (48) ಗಾಳಿಪಟ್ಟ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟವರು, ಪತ್ನಿ,ಪುತ್ರ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹುಮನಾಬಾದ್‌ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕೊಯ್ದಿದೆ. ಕುತ್ತಿಗೆ ಸೀಳಿ ರಕ್ತ ಹರಿಯುತ್ತಿದ್ದು, ಕೂಡಲೇ ಗುಂಡಪ್ಪ ಮಗಳಿಗೆ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದ್ದಾರೆ. ಆದರೆ ಗಾಳಿಪಟ ದಾರ ಕುತ್ತಿಗೆ ಆಳಕ್ಕೆ ಕೊಯ್ದಿದ್ದರಿಂದ ಅತೀವ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.

ಈ ವೇಳೆ ಇದೇ ದಾರಿಯಲ್ಲಿ ಬಂದ ವ್ಯಕ್ತಿಯೊಬ್ಬರು ಕುತ್ತಿಗೆಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಯತ್ನಿಸಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ತಡವಾಗಿ ಬಂದಿದ್ದರಿಂದ ಗುಂಡಪ್ಪ ಸ್ಥಳದಲ್ಲೇ ಅಸುನೀಗಿದ್ದಾರೆ.

ಸಂಕ್ರಾಂತಿ ದಿನದಂದು ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಆದರೆ ಗಾಳಿಪಟ ಹಾರಿಸುವಾಗ ದಾರಕ್ಕೆ ಮಾಂಜಾ ಹಾಕುವುದು ಅಪಾಯಕಾರಿ ಎಂಬುದು ತಿಳಿದಿದ್ದರು ಅದನ್ನು ತಡೆಗಟ್ಟುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಮಾಂಜಾದಲ್ಲಿ ಏನಿರುತ್ತೆ?

ಗಾಜು ಪುಡಿ ಮಾಡಿ ಅರಿಶಿನ ಅಂಟು ಅಥವಾ ಇತರೆ ಜಿಗುಟು ವಸ್ತುವಿನೊಂದಿಗೆ ಸೇರಿಸಿ ರಾಸಾಯನಿಕ ಬಣ್ಣ ಮಿಶ್ರಣ ಮಾಡಿ ನೈಲಾನ್‌ ದಾರ ಅಥವಾ ತೆಳುವಾದ ವೈರ್‌ಗೆ ಸವರಿ ಆನಂತರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಇದರಿಂದ ಅದು ಬಹಳ ಹರಿತವಾಗುತ್ತದೆ. ಈ ದಾರಕ್ಕೆ ಗಾಳಿಪಟ ಕಟ್ಟಿ ಹಾರಿಸುತ್ತಾರೆ. ಬೇರೆಯವರ ಪಟ ಕತ್ತರಿಸಲು ಈ ಮಾಂಜಾ ಉಪಯೋಗಿಸಿ ಗಾಳಿಪಟ ಹಾರಿಸುವುದು ರೂಢಿ. ಜನ–ಜಾನುವಾರು ಹಾಗೂ ಪಕ್ಷಿಗಳಿಗೆ ಇದು ಮಾರಕವಾಗಿರುವ ಕಾರಣ ನಿಷೇಧಿಸಲಾಗಿದೆ. ಆದರೂ ಎಗ್ಗಿಲ್ಲದೇ ಬಳಕೆಯಾಗುತ್ತಿದೆ.

Related Articles

Back to top button
error: Content is protected !!