ಕುಂದಾಪುರ: ಶೆಟ್ರಕಟ್ಟೆ ಬಳಿ ಅಪಘಾತ ಪ್ರಕರಣ, ಇಬ್ಬರ ಬಂಧನ, ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರ
Views: 525
ಕನ್ನಡ ಕರಾವಳಿ ಸುದ್ದಿ: ನೇರಳಕಟ್ಟೆಯ ಶೆಟ್ರಕಟ್ಟೆಯಲ್ಲಿ ಸೋಮವಾರ ಸಂಭವಿಸಿದ ಕೆಎಸ್ಸಾರ್ಟಿಸಿ ಬಸ್ ಟಿಪ್ಪರ್ ನಡುವಣ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟು ಟಿಪರ್ಚಾಲಕ ಬಿಟ್ಕಲ್ ಕಟ್ಟೆ ನಿವಾಸಿ ರಾಘವೇಂದ್ರ – (40) ಮತ್ತು ಮಾಲಕ ಬಳ್ಕೂರಿನ ಶ್ರೀಧರ (30) ಅವರನ್ನು ಗ್ರಾಮಾಂತರ ಠಾಣೆಯ ಎಸ್ಐ ನಾಸಿರ್ಹುಸೇನ್ ಅವರು ಮಂಗಳವಾರ ಬಂಧಿಸಿದ್ದಾರೆ.
ಟಿಪ್ಪರ್ ಶ್ರೀಧರ್ ಅವರ ತಾಯಿಯ ಮಾಲಕತ್ವದಲ್ಲಿದೆ. ಉದ್ದೇಶಪೂರ್ವಕವಾಗಿ ಅಪಘಾತಪಡಿಸಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಮೆ ಇತ್ಯಾದಿ ಇಲ್ಲದ ಕಾರಣ ಮೋಟಾರು ವಾಹನ ಕಾಯ್ದೆ ಪ್ರಕಾರವೂ ಪ್ರಕರಣ ದಾಖಲಾಗಿದೆ. ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಪಟ್ಟಂತೆ ಮಂಜುನಾಥ ಅವರ ಮೇಲೆ ಪ್ರಕರಣ ದಾಖಲಾಗಿದೆ.ಒಟ್ಟು 14 ಮಂದಿ ಗಾಯಗೊಂಡಿದ್ದು ಹಲವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವರು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗದಲ್ಲಿರಿಸಲಾಗಿದೆ ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿವೆ.






