ಶಿಕ್ಷಣ

ಕುಂದಾಪುರ ಎಜುಕೇಶನ್ ಸೊಸೈಟಿಗೆ “ಸುವರ್ಣ ಸಂಭ್ರಮ”ಡಿ.18ರಿಂದ 24ರವರೆಗೆ ಕಾರ್ಯಕ್ರಮ

Views: 164

ಕನ್ನಡ ಕರಾವಳಿ ಸುದ್ದಿ: 1975 ಜಿ.ಕೆ  ಮೇಲಿನಮನೆ – ಕುಸುಮ ಮೇಲಿನಮನೆ ಆರಂಭಿಸಿದ ಕುಂದಾಪುರ ಎಜುಕೇಶನ್ ಸೊಸೈಟಿಗೆ ಹಾಗೂ ಅದು ಆರಂಭಿಸಿದ ಜಿಲ್ಲೆಯ ಮೊದಲ ಆಂಗ್ಲ ಮಾಧ್ಯಮ ಶಾಲೆ ಎಚ್‌.ಎಂಎಂ ಶಾಲೆ ಈಗ ಸುವರ್ಣ ಮಹೋತ್ಸವ ಸಂಭ್ರಮದಿಂದ ಆಚರಿಸುತ್ತಿದೆ.

ಡಿ.18ರಿಂದ 24ರವರೆಗೆ ನಡೆಯುವ ಸುವರ್ಣ ಮಹೋತ್ಸವಕ್ಕೆ ರಾಜ್ಯಪಾಲರು, ಮಂತ್ರಾಲಯ ಶ್ರೀಗಳು ಆಗಮಿಸುತ್ತಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.

ಶನಿವಾರ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಡರ್ನ್ ಸ್ಕೂಲ್ ಎಂಬ ಹೆಸರಿನಿಂದ 12 ಮಕ್ಕಳೊಂದಿಗೆ ಈ ಶಾಲೆ ಆರಂಭವಾಯಿತು. ಈಗ ಎಜುಕೇಶನ್ ಸೊಸೈಟಿ ವಿಕೆಆರ್ ಶಾಲೆ, ಆ‌ರ್.ಎನ್ ಶೆಟ್ಟಿ ಪಿಯು ಕಾಲೇಜು ಹಾಗೂ ಬಿ.ಬಿ. ಹೆಗ್ಡೆ ಪದವಿ ಕಾಲೇಜನ್ನು ನಡೆಸುತ್ತಿದ್ದು, 5 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸೊಸೈಟಿಗೆ ಹಾಜಿ ಎ.ಎನ್.ಅಹಮದ್ ಕುಟ್ಟಿ ಎಸ್.ಎಸ್. ಪರಮೇಶ್ವರಯ್ಯ, ಬಿ.ಅರುಣ್ ಕುಮಾರ್ ಶೆಟ್ಟಿ ಕೆ.ಸರ್ವೋತ್ತಮ ಶೆಟ್ಟಿ ಕೆ. ಶಿವರಾಮ ಶೆಟ್ಟಿ, ಸೊಲೊಮನ್ ಸೋನ್ ಬಳಿಕ ನಾನು ದೀರ್ಘ ಅವಧಿಯ ಅಧ್ಯಕ್ಷರಾಗಿದ್ದು, ತನ್ನ ಅವಧಿಯಲ್ಲಿ ಪಿಯು ಹಾಗೂ ಪದವಿ ಕಾಲೇಜನ್ನು ಆರಂಭಿಸಲಾಗಿತ್ತು ಎಂದರು.

 ಎಚ್.ಎಂಎಂ ಶಾಲೆ ಆರಂಭವಾದ ಬಳಿಕ ಮೇಲಿನಮನೆ ದಂಪತಿಗೆ ಕೋಟ ಜಗನ್ನಾಥ ಶಾನುಭಾಗ್, ಕುಂದಾಪುರ ಲಕ್ಷ್ಮೀನಾರಾಯಣ ರಾವ್ ನೆರವಾದರು. ಹಲ್ಸನಾಡ್ ಡಾ|ವೆಂಕಟರಮಣಯ್ಯ ಛತ್ರವೊಂದನ್ನು ನೀಡಿದರು. ಬಳಿಕ ಪ್ರೌಢಶಾಲೆ ಆರಂಭಿಸಬೇಕಾಗಿ ಬಂದಾಗ ಮುಂಬಯಿ ನಿವಾಸಿ ಡಾ| ಎ.ಆರ್.ಆಚಾರ್ಯ ತಮ್ಮ ತಂದೆ ವಿಕೆಆರ್ ಆಚಾರ್ಯರ ಹೆಸರಿನಲ್ಲಿ ದೇಣಿಗೆ ನೀಡಿದರು. ಪ್ರೀತಿ, ಕಾಳಜಿ, ಗುಣಮಟ್ಟ ಎಂಬ ಧ್ಯೇಯ ವಾಕ್ಯದಲ್ಲಿ ಮುಂದುವರಿದ ಈ ಶಾಲೆಗೆ ನಗರದಲ್ಲಿ ಎರಡೇ ಪಿಯು ಕಾಲೇಜುಗಳಿದ್ದ ಕಾಲದಲ್ಲಿ 2003ರಲ್ಲಿ ಸೇರ್ಪಡೆ ಆದುದು ಆರ್‌ಎನ್ ಶೆಟ್ಟಿ ಪಿಯು ಕಾಲೇಜು. ಇದಕ್ಕೆ ಉದ್ಯಮಿ ಆರ್.ಎನ್.ಶೆಟ್ಟಿ ನೆರವಾಗಿದ್ದರು. 2010ರಲ್ಲಿ ಪದವಿ ಕಾಲೇಜು ಆರಂಭಿಸಲು ಡಾ|ಬಿ.ಬಿ. ಹೆಗ್ಡೆ ಅವರ ಪತ್ನಿ 2.5 ಎಕರೆ ಜಾಗವನ್ನು ನಗರದ ಪ್ರಮುಖ ಜಾಗದಲ್ಲಿ ನೀಡಿದ್ದರು ಎಂದರು.

ಗ್ರಾಮಾಂತರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ 

ಗ್ರಾಮಾಂತರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವಾರ್ಷಿಕ 60 ಲಕ್ಷ ರೂ. ಗಳಷ್ಟು ಶುಲ್ಕ ವಿನಾಯಿತಿ, 500 ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದೂಟ ನೀಡಲಾಗುತ್ತದೆ. ಪ್ರೌಢಶಾಲೆಯಲ್ಲಿ ಈ ವರ್ಷ ಎಸೆಸೆಲ್ಸಿಯಲ್ಲಿ 9 ಬ್ಯಾಂಕ್‌ಗಳು ಬಂದಿವೆ. ಪ್ರತಿ ವರ್ಷ ಅನೇಕ ಸಾಧನೆ ಮಾಡುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಸಾಧಕ ಶಿಕ್ಷಣ ಸಂಸ್ಥೆಯಾಗಿದೆ. ಪಿಯು ಕಾಲೇಜಿನಲ್ಲಿ ಸಿಇಟಿಯಲ್ಲಿ ಉತ್ತಮ ಸಾಧನೆ, ಪದವಿಯಲ್ಲಿ ರಾಂಕ್, ಕ್ರೀಡೆ ಸೇರಿದಂತೆ ಅನೇಕ ಸಾಧನೆಗಳನ್ನು ಮಾಡಿದೆ. 4 ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ಕಲಿಕೆಗಾಗಿ ಬರುತ್ತಿದ್ದಾರೆ.

ಡಿ.18ರಂದು 2 ಸಾವಿರ ವಿದ್ಯಾರ್ಥಿಗಳೊಂದಿಗೆ ವೈಭವದ ಪುರ ಮೆರವಣಿಗೆ 

ಡಿ.18ರಂದು 2 ಸಾವಿರ ಮಕ್ಕಳಿಂದ ಪುರಮೆರವಣಿಗೆ ನಡೆಯಲಿದ್ದು ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಉದ್ಘಾಟಿಸಲಿದ್ದಾರೆ. ಅದೇ ದಿನ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದೆ.

ಡಿ.19ರಂದು ಎಚ್‌.ಎಂಎಂ ಶಾಲೆಯ ವಾರ್ಷಿಕೋತ್ಸವ ನಡೆಯಲಿದೆ.

ಡಿ.20ರಂದು ವಿಕೆಆರ್ ಶಾಲೆಯ ವಾರ್ಷಿಕೋತ್ಸವ ನಡೆಯಲಿದ್ದು ಅಪರಾಹ್ನ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅನುಗ್ರಹ ಆಶೀರ್ವಚನ ನೀಡಲಿದ್ದಾರೆ. ಸುವರ್ಣ ಮಹೋತ್ಸವ ನೆನಪಿನ ಕಟ್ಟಡ ಸುವರ್ಣಸೌಧದ ಉದ್ಘಾಟನೆ ನಡೆಸಲಿದ್ದಾರೆ.ಸಂಸದ ಬಿ.ವೈ.ರಾಘವೇಂದ್ರ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಭಾಗವಹಿಸಲಿದ್ದಾರೆ.

ಡಿ.21ರಂದು ಸುವರ್ಣ ಮಹೋತ್ಸವ ಆಚರಣೆಗೆ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರಭಟ್, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉಪಸ್ಥಿತಿ

ಡಿ.22ರಂದು ಹೊಸದಿಗಂತ ಸಿಇಒ ಪಿ.ಎಸ್. ಪ್ರಕಾಶ್, ಎಸ್ ಪಿ ಹರಿರಾಮ್ ಶಂಕರ್ ಭಾಗವಹಿಸಲಿದ್ದಾರೆ.  

ಡಿ.23ರಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರೋಪದಲ್ಲಿ ಭಾಗವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಂಎಲ್ ಸಿ ಎಸ್. ಎಲ್. ಭೋಜೇಗೌಡ ಭಾಗವಹಿಸಲಿದ್ದಾರೆ ಎಂದರು.

ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಪದವಿ ಕಾಲೇಜು ಪ್ರಾಂಶುಪಾಲ ಡಾ| ಉಮೇಶ್ ಶೆಟ್ಟಿ ಕೆ, ಪಿಯು ಕಾಲೇಜು ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಎಚ್ ಎಂ ಎಂ ವಿಕೆಆರ್ ಶಾಲೆಗಳ ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್ ಉಪಸ್ಥಿತರಿದ್ದರು.

Related Articles

Back to top button