ಇತರೆ

ಕಾರ್ಕಳ: ಆಕಸ್ಮಿಕ ತಗುಲಿದ ಬೆಂಕಿ ನಂದಿಸಲು ಹೋದ ವ್ಯಕ್ತಿ ಜ್ವಾಲೆಗೆ ಸಿಲುಕಿ ಸಾವು 

Views: 40

ಕನ್ನಡ ಕರಾವಳಿ ಸುದ್ದಿ: ಆಕಸ್ಮಿಕವಾಗಿ ತಗುಲಿದ ಬೆಂಕಿಯನ್ನು ನಂದಿಸಲು ಹೋದ ವೃದ್ಧರೊಬ್ಬರು ಬೆಂಕಿಯ ಜ್ವಾಲೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಿಟ್ಟೆ ಗ್ರಾಮದ ಬಜೆಕಳ ಎಂಬಲ್ಲಿ ಗುರುವಾರ ಸಂಭವಿಸಿದೆ.

ಬಜೆಕಳದ ‘ಶಿವಪೂಜ’ ನಿವಾಸದ ನಿವಾಸಿ ಜಯಕರ ಶೆಟ್ಟಿ (80) ಮೃತರು. ಅವರು ಗಂಭೀರ ಗಾಯಗೊಂಡಾಗ ಕಾರ್ಕಳ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ರಾತ್ರಿ ಮೃತಪಟ್ಟಿದ್ದಾರೆ.

ಗುರುವಾರ ಜಯಕರ ಶೆಟ್ಟಿ ಅವರ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ತೋಟದಲ್ಲಿ ತೆಂಗು, ಅಡಿಕೆ ಮರಗಳಿದ್ದು, ಒಣಗಿದ ಗಿಡಗಂಟಿಗಳಿಗೆ ತಗುಲಿದ ಬೆಂಕಿ ಕ್ಷಣಾರ್ಧದಲ್ಲಿ ತೋಟದಾದ್ಯಂತ ವ್ಯಾಪಿಸಿತ್ತು. ತತ್ ಕ್ಷಣ ಕಾರ್ಯಪ್ರವೃತ್ತರಾದ ಜಯಕರ ಶೆಟ್ಟಿ ತಾವೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಅವರೇ ಜ್ವಾಲೆಗೆ ಸಿಲುಕಿದ್ದಾರೆ.

ಬೆಂಕಿ ಅವರಿಸಿಕೊಂಡಿದ್ದನ್ನು ಕಂಡು ಅವರ ಪತ್ನಿ ಪುಷ್ಪಾ ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯ ನಿವಾಸಿ ಸದಾನಂದ ಹೆಗ್ಡೆ ಹಾಗೂ ಇತರರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಜಯಕರ ಶೆಟ್ಟಿ ಅವರ ದೇಹದ ಕೆಲವು ಭಾಗಗಳು ಸುಟ್ಟು ಹೋಗಿದ್ದವು. ಅಸ್ವಸ್ಥಗೊಂಡಿದ್ದ ಅವರನ್ನು ಅಗ್ನಿಶಾಮಕ ದಳದವರು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿ, ಆ್ಯಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದರು.

ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ಅಚ್ಯುತ್ ಕರ್ಕೇರ, ಹರಿಪ್ರಸಾದ್, ಬಸವರಾಜ್‌ ಮತ್ತು ಲೋಕೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

Related Articles

Back to top button
error: Content is protected !!