ಕೃಷಿ

ಇಂದಿನಿಂದ ರೈತರಿಗೆ 7 ತಾಸು ವಿದ್ಯುತ್: ಸಿಎಂ

Views: 0

ರಾಜ್ಯಾದ್ಯಂತ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ತಾಸುಗಳ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಮ್ಮ ಗೃಹ ಕಚೇರಿ ಕೃಷ್ಣದಲ್ಲಿಂದು ನಡೆದ ಇಂಧನ ಇಲಾಖೆಯ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ಒದಗಿಸುವ ತೀರ್ಮಾನ ಮಾಡಲಾಗಿದ್ದು, ಇಂದಿನಿಂದಲೇ 7 ತಾಸು ವಿದ್ಯುತ್ ನೀಡಲಾಗುವುದು ಎಂದರು.

ನಿರಂತರ 7 ಗಂಟೆಗಳ ಅವಧಿಗೆ ವಿದ್ಯುತ್ ಒದಗಿಸಲು ಪ್ರತಿದಿನ 14 ಮಿಲಿಯನ್ ಯೂನಿಟ್‌ಗಳ ಅಗತ್ಯವಿದ್ದು, ಇದಕ್ಕಾಗಿ ಸುಮಾರು 1500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ 7 ತಾಸು ವಿದ್ಯುತ್ ನೀಡಲು ಸಭೆ ನಿರ್ಧರಿಸಿದ್ದು, ಅದರಂತೆ ಅನುದಾನದ ಉಳಿತಾಯ ಮರು ಹಂಚಿಕೆಯ ಮೂಲಕ 1500 ಕೋಟಿ ರೂ. ವೆಚ್ಚವನ್ನು ಭರಿಸಲಾಗುತ್ತದೆ ಎಂದರು.

ಮುಂದಿನ ವರ್ಷದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಸೌರ ವಿದ್ಯುತ್ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್ ಒದಗಿಸಲು ಇದರಿಂದ ಅನುಕೂಲವಾಗಲಿದೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಾಗಿದೆ. ಕೃಷಿಯಲ್ಲಿ ವಿದ್ಯುತ್ ಬಳಕೆ ಶೇ. 50 ರಿಂದ ಶೇ. 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲೂ ಶೇ. 9 ರಿಂದ 19 ರಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ. ಮಳೆ ಕೊರತೆ, ಕೋವಿಡ್ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದ್ದು, ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ, ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ ಎಂದು ಹೇಳಿದರು.

ಸೆಕ್ಷನ್ 11 ರಡಿ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ರಾಜ್ಯಕ್ಕೆ ನೀಡುವಂತೆ ಆದೇಶ ಹೊರಡಿಸಿ, ಅದರಂತೆ ವಿದ್ಯುತ್ ಪಡೆಯಲಾಗುತ್ತಿದೆ. ಈ ಮೂಲಕ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದರು.

ಈ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವಗುಪ್ತ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
error: Content is protected !!